ಮುಂಬೈ ಮಹಾನಗರ ಜನತೆಯ ಸಂಚಾರಕ್ಕೆ ಲೋಕಲ್ ಟ್ರೈನ್ ಬಳಿಕ ಅತ್ಯಂತ ಅನುಕೂಲಕರವೆಂದು ಪರಿಗಣಿಸಲಾಗಿರುವ ವಿಧಾನಗಳಲ್ಲಿ ಒಂದಾದ ಅಟಲ್ ಸೇತುವೆ ಮೇಲಿಂದ ಜಿಗಿದು ಮಹಿಳೆ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಕ್ಯಾಬ್ ಚಾಲಕನ ಸಮಯ ಪ್ರಜ್ಞೆಯಿಂದ ಹಾಗೂ ಸಕಾಲಕ್ಕೆ ಆಗಮಿಸಿದ ಪೊಲೀಸರ ಪ್ಯಾಟ್ರೋಲಿಂಗ್ ಟೀಮ್ ನೆರವಿನ ಕಾರಣಕ್ಕೆ ಸಾವಿನಿಂದ ಪಾರಾಗಿದ್ದಾರೆ.
ಶುಕ್ರವಾರ ಸಂಜೆ 7:45ರ ಸುಮಾರಿಗೆ ಈ ಘಟನೆ ನಡೆದಿದ್ದು, ಮುಂಬೈನ ಮುಲಂದ್ ನಿವಾಸಿ 56 ವರ್ಷದ ರೀಮಾ ಮುಕೇಶ್ ಪಟೇಲ್ ಎಂಬ ಮಹಿಳೆ ಕ್ಯಾಬ್ ಮೂಲಕ ಆಗಮಿಸಿದ್ದು, ಅಟಲ್ ಸೇತುವೆ ಬಳಿ ನಿಲ್ಲಿಸಿ ಕುಳಿತಿದ್ದಾರೆ. ಆದರೆ ಇವರ ವರ್ತನೆ ಕ್ಯಾಬ್ ಚಾಲಕನಿಗೆ ಅನುಮಾನ ತರಿಸಿದ್ದು ಆತ ಕೂಡ ಅಲರ್ಟ್ ಆಗಿಯೇ ಇದ್ದ. ಆಗ ಇದ್ದಕ್ಕಿದ್ದಂತೆ ಅವರು ಸೇತುವೆ ಮೇಲಿಂದ ಜಿಗಿಯಲು ಮುಂದಾಗಿದ್ದು, ಸಮಯ ಪ್ರಜ್ಞೆ ಮೆರೆದ ಕ್ಯಾಬ್ ಚಾಲಕ ಅವರ ಕೂದಲನ್ನು ಹಿಡಿದು ಎಳೆದಿದ್ದಾನೆ.
ಇದೇ ಸಂದರ್ಭದಲ್ಲಿ ಸೇತುವೆ ಮೇಲಿಂದ ಹೋಗುತ್ತಿದ್ದ ವಾಹನದಲ್ಲಿ ಇದ್ದ ಒಬ್ಬರು ಪೊಲೀಸ್ ಪ್ಯಾಟ್ರೋಲಿಂಗ್ ಟೀಮ್ ಗೆ ಕ್ಯಾಬ್ ನಿಂತಿರುವುದನ್ನು ಮೊಬೈಲ್ ಮೂಲಕ ತಿಳಿಸಿದ್ದರು. ಮಹಿಳೆ ಜಿಗಿದು ಕ್ಯಾಬ್ ಚಾಲಕ ಆಕೆಯ ಕೂದಲನ್ನು ಹಿಡಿದ ಸಂದರ್ಭದಲ್ಲಿಯೇ ಪೊಲೀಸರ ಟೀಮ್ ಅಲ್ಲಿಗೆ ಆಗಮಿಸಿದ್ದು, ಕೂಡಲೇ ಪೊಲೀಸ್ ತಂಡದಲ್ಲಿದ್ದ ಒಬ್ಬರು ಮಹಿಳೆ ಕೈ ಹಿಡಿದು ಎಳೆದುಕೊಂಡಿದ್ದಾರೆ.
ಬಳಿಕ ಮಹಿಳೆಯ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಮಾನಸಿಕ ಒತ್ತಡದ ಕಾರಣಕ್ಕೆ ಮಹಿಳೆ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಈ ಹಿಂದೆ ಇಂಜಿನಿಯರ್ ಒಬ್ಬರು ಅಟಲ್ ಸೇತುವೆ ಮೇಲೆ ತಮ್ಮ ಕಾರು ನಿಲ್ಲಿಸಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಸೇತುವೆ ಬಳಿ 24 ಗಂಟೆಗಳ ಕಾಲ ಪೊಲೀಸ್ ನಿಗಾವಣೆ ಇದ್ದು ಯಾರಾದರೂ ಕಾರು ನಿಲ್ಲಿಸಿದರೆ ಅವರಿಗೆ ಎಚ್ಚರಿಕೆ ನೀಡಲಾಗುತ್ತದೆ.
ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ಅದಕ್ಕೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ಕೆಳಕಂಡ ದೂರವಾಣಿಗಳ ಸಂಖ್ಯೆಯನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು.
ಮಿತ್ರಂ ಫೌಂಡೇಶನ್ ( ಬೆಂಗಳೂರು ) – 080-25722573
COOJ ಮೆಂಟಲ್ ಹೆಲ್ತ್ ಫೌಂಡೇಶನ್ (ಗೋವಾ): 0832-2252525
ಸಂಜೀವಿನಿ ( ದೆಹಲಿ ) – Centre 1 (Jangpura): 011-24311918, 011-24318883, 011-43001456, Centre 2 (Qutub Institutional Area): 011- 40769002, 011-41092787
ಒಂದ್ರವೇಲ ಫೌಂಡೇಶನ್ (ಗುಜರಾತ್) – 18602662345
NOTE:These numbers have been aggregated from publicly available sources and their veracity is not attributed to kannadaduni.com