ಮಹಿಳೆಯರ ಸುರಕ್ಷತೆ ಈಗ ಸಮಸ್ಯೆಯಲ್ಲ, ಹೆಣ್ಣುಮಕ್ಕಳು ಸ್ವಚ್ಛಂದವಾಗಿ ಓಡಾಡಬಹುದು ಎಂಬ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿ ಮುಂಬೈನಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜವನ್ನ ಬೆಚ್ಚಿಬೀಳಿಸಿದೆ.
ಗುರುವಾರ ಆಗಸ್ಟ್ 8 ರಂದು ಓಶಿವಾರದ ಆದರ್ಶ್ ನಗರ ಸಿಗ್ನಲ್ ಬಳಿ ಆಟೋರಿಕ್ಷಾದಲ್ಲಿ ಹುಡುಗಿಯೊಬ್ಬಳನ್ನು ಥಳಿಸುತ್ತಿದ್ದ ಬಗ್ಗೆ ‘ಅಂಧೇರಿವೆಸ್ಟ್ ಶಿಟ್‌ಪೋಸ್ಟಿಂಗ್’ ಎಂಬ ಇನ್‌ಸ್ಟಾಗ್ರಾಮ್ ಖಾತೆ ಬಹಿರಂಗಪಡಿಸಿದ್ದು ಭಯಾನಕ ಸುದ್ದಿಯೊಂದು ಹೊರಬಂದಿದೆ.
‘ಅಂಧೇರಿವೆಸ್ಟ್ ಶಿಟ್‌ಪೋಸ್ಟಿಂಗ್’ ಎಂಬ ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರರ ಮಾಜಿ ಸಹೋದ್ಯೋಗಿಗಳಲ್ಲಿ ಒಬ್ಬರಾದ ಇಶಿತಾ ಆಟೋದಲ್ಲಿ ಗುರುವಾರ ಆಗಸ್ಟ್ 8 ರಂದು ಪ್ರಯಾಣಿಸುತ್ತಿದ್ದರು. ಆಕೆ ಪಕ್ಕದಲ್ಲಿ ಆಟೋದಲ್ಲಿ ಯುವತಿಯೊಬ್ಬಳು ಕೂಗುತ್ತಿರುವುದನ್ನು ಕೇಳಿದ್ದಾರೆ.
ಅದೃಷ್ಟವಶಾತ್ ಎರಡೂ ರಿಕ್ಷಾಗಳು ಓಶಿವಾರದ ಆದರ್ಶ ನಗರ ಸಿಗ್ನಲ್‌ನಲ್ಲಿ ನಿಂತವು. ಕೂಗುತ್ತಿದ್ದ ಯುವತಿಯನ್ನು ಸಹಾಯಬೇಕೆ ಎಂದು ಇಶಿತಾ ಕೇಳಿದಾಗ, ಅವಳು ತಕ್ಷಣ ಹೌದು ಎಂದು ಹೇಳಿದ್ದಾಳೆ. ಬಳಿಕ ಯುವತಿ ಕೈ ಹಿಡಿದು ನೇರವಾಗಿ ಓಡಿ ಓಶಿವಾರಾ ಪೊಲೀಸ್ ಠಾಣೆಗೆ ಇಶಿತಾ ತೆರಳಿದ್ದಾರೆ. ಈ ವೇಳೆ ಆಟೋದಲ್ಲಿದ್ದ ವ್ಯಕ್ತಿ ಇವರಿಬ್ಬರ ಹಿಂದೆಯೇ ಹೋಗಿದ್ದಾನೆ.
ಈ ಘಟನೆಯ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಇಶಿತಾ ತೆಗೆದುಕೊಂಡಿದ್ದು ಅದನ್ನು ‘ಅಂಧೇರಿವೆಸ್ಟ್ ಶಿಟ್‌ಪೋಸ್ಟಿಂಗ್’ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬಹಿರಂಗಪಡಿಸಲಾಗಿದೆ.
ಯುವತಿಯ ಗೆಳೆಯ ಆಕೆಯನ್ನು ದಾರಿಯುದ್ದಕ್ಕೂ ಹುಚ್ಚನಂತೆ ಥಳಿಸಿದ್ದಾನೆ. ಇಬ್ಬರೂ ಕಿರುಚುತ್ತಾ ಠಾಣೆಯತ್ತ ಓಡಿದಾಗ ಯಾವ ಪೊಲೀಸ್ ಅಧಿಕಾರಿಯೂ ಅವರ ಸಹಾಯಕ್ಕೆ ಮುಂದಾಗಿಲ್ಲ. ಇಶಿತಾ ತನ್ನ ಫೋನ್ ತೆಗೆದುಕೊಂಡು ರೆಕಾರ್ಡಿಂಗ್ ಪ್ರಾರಂಭಿಸುವವರೆಗೂ, ಆ ವ್ಯಕ್ತಿ ಹಿಂದೆ ಸರಿಯಲಿಲ್ಲ. ಯುವತಿಯ ಗೆಳೆಯನ ತಪ್ಪನ್ನು ಎತ್ತಿ ತೋರಿಸುವವರೆಗೂ ಇಬ್ಬರು ಯುವತಿಯರನ್ನು ರಕ್ಷಿಸಲು ಠಾಣೆಯಿಂದ ಪೊಲೀಸ್ ಅಧಿಕಾರಿಗಳು ಯಾರೂ ಬಂದಿಲ್ಲ. ಅದರ ನಂತರವೂ ಪೊಲೀಸರು ಯುವಕನನ್ನು ಏನೂ ಕೇಳದೆ ಹುಡುಗಿಯನ್ನು ಅವರ ಮನೆಯವರ ಬಗ್ಗೆ ಕೇಳುತ್ತಲೇ ಇದ್ದಾರೆ.
ಆದರೆ ಇದು ಈ ಅತಿರೇಕದ ಘಟನೆಯ ಅಂತ್ಯವಾಗಿರಲಿಲ್ಲ. ವಿಡಿಯೋದಲ್ಲಿ ಕಂಡುಬರುವ ಪೊಲೀಸ್ ಅಧಿಕಾರಿಯೊಬ್ಬರು ಅವರಿಗೆ ಆಕ್ಷೇಪಾರ್ಹ ಸಲಹೆ ನೀಡುತ್ತಿದ್ದರು. ಅವರ ನಿಖರವಾದ ಮಾತುಗಳಲ್ಲಿ ಮುಂಬೈನಲ್ಲಿ ವಾಸಿಸುವ ಮಹಿಳೆಯರು ಅದೃಷ್ಟವಂತರು. ಅವರು ರಾತ್ರಿ 8 ರ ನಂತರ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರು ಇಶಿತಾ ಗೆಳೆಯರೊಂದಿಗೆ ಫೋನ್ ನಲ್ಲಿ ಮಾತನಾಡಿ ಆಕೆಯನ್ನು ಮನೆಗೆ ಹೋಗಲು ಸೂಚಿಸುವಂತೆ ಕೇಳಿದ್ದು ಮುಂಬೈ ಹೇಗಿರುತ್ತದೆ ಎಂಬುದನ್ನು ಆಕೆಗೆ ಅರ್ಥಮಾಡಿಸುವಂತೆಯೂ ಫೋನ್ ನಲ್ಲಿ ಮಾತನಾಡಿದ್ದಾರೆ. ಜೊತೆಗೆ ಪೊಲೀಸ್ ಅಧಿಕಾರಿಗಳು ಯುವತಿಯನ್ನು ಪೊಲೀಸ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಇಶಿತಾರನ್ನು ಒತ್ತಾಯಿಸುತ್ತಲೇ ಇದ್ದುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಪೋಸ್ಟ್ ಮಾಡಿರುವ ಎರಡು ವೀಡಿಯೊಗಳಲ್ಲಿ, ಪೊಲೀಸ್ ಅಧಿಕಾರಿಗಳು ಅವರೊಂದಿಗೆ ಹೇಗೆ ಅನುಚಿತವಾಗಿ ವರ್ತಿಸುತ್ತಿದ್ದು ಯಾವುದೇ ರೀತಿಯಲ್ಲಿ ಸಹಾಯಕ್ಕೆ ಮುಂದಾಗದಿರುವುದು ಗೊತ್ತಾಗಿದೆ.
ಪೊಲೀಸರ ವರ್ತನೆಗೆ ಕೋಪಗೊಂಡ ನೆಟ್ಟಿಗರು “ಪೊಲೀಸರು ನಮ್ಮನ್ನು ನಡೆಸಿಕೊಳ್ಳುವ ರೀತಿ ಹೀಗಿದ್ದರೆ ಘಟನೆಯನ್ನು ವರದಿ ಮಾಡಲು ಪೊಲೀಸ್ ಠಾಣೆಗೆ ಹೋಗುವುದನ್ನು ಊಹಿಸಲೂ ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಇಶಿತಾ ಅವರ ಬಲವಾದ ಮನೋಭಾವವನ್ನು ಶ್ಲಾಘಿಸಿದ್ದಾರೆ. ಕೆಲವರು ಅದಕ್ಕಾಗಿಯೇ ಮುಂಬೈನಲ್ಲಿ ಪೊಲೀಸರಿಗೆ ಸಮಸ್ಯೆಗಳನ್ನು ವರದಿ ಮಾಡಲು ಹೋಗುವುದಿಲ್ಲ ಎಂದಿದ್ದಾರೆ.