ಮುಂಬೈ: ಉದ್ಯಮಿ ರತನ್ ಟಾಟಾ ಅವರ ಕಾರ್ ನೋಂದಣಿ ಸಂಖ್ಯೆ ಹಾಕಿಕೊಂಡಿದ್ದ ಮಹಿಳೆ ವಿರುದ್ಧ ಮುಂಬೈ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೀತಾಂಜಲಿ ಶಾ ಮಹಿಳೆ ತನ್ನ ಬಿಎಂಡಬ್ಲ್ಯೂ ಕಾರ್ ನ ಒಂದು ಸಂಖ್ಯೆಯನ್ನು ಮರೆಮಾಚಿ ರತನ್ ಟಾಟಾ ಅವರ ನಂಬರ್ ಹೋಲುವ ಹಾಕಿಕೊಂಡು ತಿರುಗಾಡುತ್ತಿದ್ದರು. ಮುಂಬೈನ ವರ್ಲಿ ಕೇಂದ್ರ ಕಚೇರಿಗೆ ಚಾಲಕ ನಕಲಿ ವಾಹನ ನಂಬರ್ ಪ್ಲೇಟ್ ಬಳಸುತ್ತಿರುವ ಕುರಿತು ಪೊಲೀಸರಿಂದ ಮಾಹಿತಿ ಬಂದಿದೆ.
ಆದರೆ, ರತನ್ ಟಾಟಾ ಅವರ ಕಾರಿನ ನಂಬರ್ ಸರಿಯಾಗಿದ್ದು, ಗೀತಾಂಜಲಿ ಶಾ ಅವರೇ ನಕಲಿ ನಂಬರ್ ಬಳಸುತ್ತಿರುವುದು ಗೊತ್ತಾಗಿದೆ. ಗೀತಾಂಜಲಿಗೆ ಸೇರಿದ ಬಿಎಂಡಬ್ಲ್ಯೂ ಕಾರ್ ಗೆ 1110 ನಂಬರ್ ನೀಡಲಾಗಿತ್ತು. ಅವರು ಸಂಖ್ಯಾಶಾಸ್ತ್ರದ ಅನುಗುಣವಾಗಿ ತಮ್ಮ ಕಾರಿನ ಮೇಲೆ 111 ಬರೆಸಿಕೊಂಡು ತಿರುಗಾಡುತ್ತಿದ್ದರು.
ಈ ಕಾರ್ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಟಾಟಾ ಕಚೇರಿಗೆ ನೋಟಿಸ್ ನೀಡಲಾಗಿದೆ. ಬಳಿಕ ಪರಿಶೀಲನೆ ನಡೆಸಿದಾಗ ಕೈಗಾರಿಕೋದ್ಯಮಿ ರತನ್ ಟಾಟಾ ಒಡೆತನದ ಸಂಖ್ಯೆಯನ್ನು ಗೀತಾಂಜಲಿ ಬಳಸುತ್ತಿರುವುದು ತಿಳಿದುಬಂದಿದೆ. ಗೀತಾಂಜಲಿ ಶಾ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಹಾಗೂ ಮೋಟಾರು ವಾಹನ ಕಾಯ್ದೆ ಸಂಬಂಧಿತ ವಿವಿಧ ವಿಭಾಗಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಆಕೆ ತನ್ನ ಅಸಲಿ ನಂಬರ್ ಮರೆಮಾಚಿ ರತನ್ ಟಾಟಾ ಕಾರಿನ ನಂಬರ್ ಬಳಸುತ್ತಿರುವುದು ಗೊತ್ತಾಗಿದ್ದು, ಮಾತುಂಗ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಮುಂಬೈ ವಲಯ 4 ರ ಸಂಚಾರ ಪೊಲೀಸ್ ಆಯುಕ್ತ ವಿಜಯ್ ಪಾಟೀಲ್ ತಿಳಿಸಿದ್ದಾರೆ.