ಮುಂಬೈನ ಕಂಡಿವಲಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡದಂತೆ ಸೂಚನೆ ನೀಡಿದ ಪೊಲೀಸ್ ಕಾನ್ಸ್ ಟೇಬಲ್ ರನ್ನು ಇರಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾನ್ಸ್ ಟೇಬಲ್ ಉದಯ್ ಕದಮ್ ಅವರನ್ನು ಇರಿದಿದ್ದ ತರಕಾರಿ ವ್ಯಾಪಾರಿಯನ್ನು ಬಂಧಿಸಲಾಗಿದೆ. ಕಾನ್ಸ್ಟೇಬಲ್ ಕೈಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆರೋಪಿ ರಾಮ ಗೊಂಟೆ ಎಂಬಾತನನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮುಂಬೈನ ಕಂಡಿವಲಿ ಪ್ರದೇಶದಲ್ಲಿ ಜನರು ಹೋಗುತ್ತಿದ್ದಾಗ ರಾಮ ಗೊಂಟೆ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಕಾನ್ಸ್‌ಟೇಬಲ್ ಹೇಳಿದ್ದು, ತಪ್ಪಿದರೆ, ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು ಗೊಂಟೆ, ಕಾನ್‌ಸ್ಟೆಬಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.