ಮುಂಬೈ: ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್(TISS) ನಲ್ಲಿ ಉನ್ನತ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಹಿಂಬಾಲಿಸುವುದು ಮತ್ತು ಮಾನಹಾನಿ ಮಾಡಿದ ಆರೋಪದಲ್ಲಿ ಟ್ರಾಂಬೆ ಪೊಲೀಸರಿಂದ ಬಂಧಿತರಾಗಿದ್ದಾರೆ.
ದೂರುದಾರರು ಸಮಾಜ ಸೇವಕರಾಗಿದ್ದು, ಅವರು TISS ನಲ್ಲಿ ಉದ್ಯೋಗಿಯಾಗಿದ್ದಾರೆ. ಸಂತ್ರಸ್ತೆಯ ಸಹೋದರ ಮತ್ತು ಸೋದರ ಮಾವನಿಗೆ ಕೆಲಸ ನೀಡುವುದಾಗಿ ಆರೋಪಿ ಭರವಸೆ ನೀಡಿದ್ದರು. ಅದೇ ನೆಪದಲ್ಲಿ, ದೆಹಲಿ ಮತ್ತು ಹೈದರಾಬಾದ್‌ನಲ್ಲಿ ಅನೇಕ ಸಂದರ್ಭಗಳಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ದೂರು ನೀಡಿದ್ದಾರೆ.
ಅಧಿಕಾರಿ ಹೇಳಿದಂತೆ ಕೇಳಲು ನಿರಾಕರಿಸಿದಾಗ ತನ್ನ ಸಹೋದರನನ್ನು ಕೆಲಸದಿಂದ ವಜಾ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ. TISS ಕ್ಯಾಂಪಸ್ ನಾದ್ಯಂತ ಸಂತ್ರಸ್ತೆ ಮತ್ತು ಆರೋಪಿಗಳು ಒಟ್ಟಿಗೆ ಇರುವ ಚಿತ್ರಗಳನ್ನು ಸೋರಿಕೆ ಮಾಡುವುದಾಗಿ ಆಗಾಗ್ಗೆ ಬೆದರಿಕೆ ಹಾಕುತ್ತಿದ್ದ. ಆರೋಪಿಯ ಪತ್ನಿಯಿಂದ ಮಾನಸಿಕ ಕಿರುಕುಳವನ್ನು ಅನುಭವಿಸಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಸಂತ್ರಸ್ತೆ ಪೊಲೀಸರಿಗೆ ದೂರು ನೀಡುವ ಮೊದಲು, ಆರೋಪಿ ಜೊತೆಗೆ ಸಂತ್ರಸ್ತೆಯ ಕೆಲವು ಚಿತ್ರಗಳನ್ನು ಕ್ಯಾಂಪಸ್ ನಾದ್ಯಂತ ಹರಡಿದ್ದು, ಇದರಿಂದ ಆಕೆಗೆ ಮುಜುಗರವಾಗಿದೆ ಹೆಸರು ಹಾಳಾಗಿದೆ ಎಂದು ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿ ಆರೋಪಿ ಮತ್ತು ಆತನ ಪತ್ನಿಯನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಮಾರ್ಚ್ 24 ರಂದು ಆರೋಪಿಯನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾರ್ಚ್ 27 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಯು ಮುಂಬೈನ TISS ನಲ್ಲಿ ಸಿಬ್ಬಂದಿ ಮತ್ತು ಆಡಳಿತ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾನೆ.