
ಸೋಮವಾರ ಬೆಳಗ್ಗೆ 11:30 ರ ಸುಮಾರಿಗೆ ಮೀರಾ ಬಯಾಂದರ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 60 ವರ್ಷದ ಹರೇಶ್ ಮೆಹತಾ ಹಾಗೂ ಅವರ ಮಗ ಜಯ್ ಮೆಹತಾ ಫ್ಲಾಟ್ ಫಾರಂ ನಂಬರ್ 6 ರಲ್ಲಿ ಲೋಕಾಭಿರಾಮವಾಗಿ ಮಾತನಾಡಿಕೊಂಡು ಹೋಗುತ್ತಿರುತ್ತಾರೆ.
ಈ ವಿಡಿಯೋ ಗಮನಿಸಿದರೆ ಅವರುಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವಿದೆ ಎಂಬ ಕುರಿತು ಲವಲೇಶವೂ ಗೊತ್ತಾಗುವುದಿಲ್ಲ. ಅಲ್ಲದೆ ಇದೇ ಸಂದರ್ಭದಲ್ಲಿ ಲೋಕಲ್ ರೈಲು ಒಂದು ಹಾದು ಹೋಗುತ್ತದೆ.
ಅಪ್ಪ – ಮಗ ನಡೆದುಕೊಂಡು ಹೋಗಿ ಪ್ಲಾಟ್ ಫಾರಂ ಅಂಚಿನಲ್ಲಿದ್ದ ರೈಲ್ವೆ ಟ್ರ್ಯಾಕಿನಲ್ಲಿ ಇಳಿಯುತ್ತಾರೆ. ನಂತರ ಎದುರಿನಿಂದ ಬರುತ್ತಿದ್ದ ಚರ್ಚ್ ಗೇಟ್ ಕಡೆ ತೆರಳುತ್ತಿದ್ದ ರೈಲಿನ ಮುಂದೆ ಹಳಿಗಳ ಮೇಲೆ ಕೈ ಕೈ ಹಿಡಿದುಕೊಂಡು ಮಲಗಿದ್ದು, ಕ್ಷಣಾರ್ಧದಲ್ಲಿ ಅವರ ಮೇಲೆ ರೈಲು ಹಾದು ಹೋಗುತ್ತದೆ. ಇದರ ಪರಿಣಾಮ ಇಬ್ಬರೂ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಹರೇಶ್ ಮೆಹತಾ ಪತ್ನಿ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿದ್ದರು ಎನ್ನಲಾಗಿದ್ದು, ಕಳೆದ ವರ್ಷವಷ್ಟೇ ಅವರ ಮಗ ಜೈ ಮೆಹತಾಗೆ ವಿವಾಹವಾಗಿತ್ತು. ಯಾವ ಕಾರಣಕ್ಕೆ ಅಪ್ಪ – ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಆದರೆ ಮನೆಯಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.