ಮುಂಬೈ: ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವೈದ್ಯನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ವರದಿಯ ಪ್ರಕಾರ, ಮದುವೆಯಾಗುವುದಾಗಿ ನಂಬಿಸಿ ನರ್ಸ್ ಮೇಲೆ ವೈದ್ಯ ಅತ್ಯಾಚಾರ ಎಸಗಿದ್ದಾನೆ.
ಜೂನ್ 4 ರಂದು ಛತ್ತೀಸ್ಗಡದ ರಾಯಪುರದಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಮುಂಬೈಗೆ ತೆರಳುವ ಮೊದಲು ರಾಯಪುರದ ನರ್ಸ್ ಜೊತೆಗೆ ಸಂಬಂಧ ಹೊಂದಿದ್ದು, ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆತನನ್ನು ಸಂಪರ್ಕಿಸಲು ನರ್ಸ್ ಪದೇ ಪದೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ದೂರು ದಾಖಲಿಸಿದ್ದಾಳೆ. ನಂತರ ಹೆಚ್ಚಿನ ತನಿಖೆಗಾಗಿ ಬಾಂದ್ರಾ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ.
ಪೋಲಿಸ್ ಮಾಹಿತಿಯ ಪ್ರಕಾರ, ವೈದ್ಯ ಮುಂಬೈನ ಖಾರ್ ಮೂಲದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತರಬೇತಿ ಅವಧಿಯಲ್ಲಿದ್ದಾನೆ. ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಚೈತನ್ಯ ಎಸ್. ಅವರು, ಛತ್ತೀಸ್ಗಡದ ರಾಯಪುರದಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚಿನ ತನಿಖೆಗಾಗಿ ಬಾಂದ್ರಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 376 ಸಂಬಂಧಿತ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ. ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ ಎಂದು ಹೇಳಲಾಗಿದೆ.