ಮುಂಬೈ: ಮಹಿಳೆಯೊಬ್ಬಳು 54 ವರ್ಷದ ವಿಧುರನ ಜೊತೆ ಸ್ನೇಹ ಬೆಳೆಸಿ 5 ಲಕ್ಷ ರೂ. ವಂಚಿಸಿದ್ದಾಳೆ. ಹಣ ಕಳೆದುಕೊಂಡು ಕಂಗಾಲಾದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಘಟನೆ ನಡೆದಿದೆ. 52 ವರ್ಷದ ವ್ಯಕ್ತಿ 5.28 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಹಿಳೆಯೊಬ್ಬಳು ಆತನೊಂದಿಗೆ ಸ್ನೇಹ ಬೆಳೆಸಿ ವೀಡಿಯೊ ಕರೆಯಲ್ಲಿ ವಿವಸ್ತ್ರಗೊಳ್ಳುವಂತೆ ಮಾಡಿ ವಂಚಿಸಿದ್ದಾಳೆ. ವಿಡಿಯೋದೊಂದಿಗೆ ವಿಧುರ ವ್ಯಕ್ತಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾಳೆ. ಮಹಿಳೆಗೆ ಇತರ ವಂಚಕರು ಕೂಡ ಸಹಾಯ ಮಾಡಿದ್ದಾರೆ. ವಂಚನೆಗೊಳಗಾದ ವ್ಯಕ್ತಿ ಬುಧವಾರ ಅಂಧೇರಿ ಪೊಲೀಸರನ್ನು ಸಂಪರ್ಕಿಸಿದ್ದು, ಎಫ್‌ಐಆರ್ ದಾಖಲಿಸಲಾಗಿದೆ.
ದೂರುದಾರರ ಪ್ರಕಾರ, ಅವರ ಪತ್ನಿ 2019 ರಲ್ಲಿ ನಿಧನರಾದರು. ನಂತರ ಅವರು ಖಿನ್ನತೆಗೆ ಒಳಗಾಗಿದ್ದರು. ಕೆಲಸ ಮಾಡುವುದನ್ನು ನಿಲ್ಲಿಸಿದ್ದು, ಅವರ ಮಕ್ಕಳು ಅವರನ್ನು ನೋಡಿಕೊಳ್ಳುತ್ತಾರೆ. ಸೆ. 2 ರಂದು ಫೇಸ್ ಬುಕ್ ನಲ್ಲಿ ಪ್ರಿಯಾಂಕಾ ಜೈನ್ ಎಂದು ಪೋಸ್ ನೀಡಿದ ಮಹಿಳೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ಇಬ್ಬರು ಸ್ನೇಹಿತರಾಗಿ ಮೊಬೈಲ್ ಸಂಖ್ಯೆ ವಿನಿಮಯವಾಗಿ ಇಬ್ಬರೂ ಫೋನ್ ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದರು.
ನಂತರ ಮಹಿಳೆ ಬಾತ್ರೂಮ್ ಗೆ ಹೋಗಿ ತನಗಾಗಿ ವಸ್ತ್ರಗಳನ್ನು ತೆಗೆಯುವಂತೆ ದೂರುದಾರರನ್ನು ಕೇಳಿದ್ದು, ಅವರು ಆಕೆ ಹೇಳಿದಂತೆ ಬೆತ್ತಲಾಗಿ ಬಲೆಗೆ ಬಿದ್ದಿದ್ದಾರೆ. ಅದನ್ನು ವಿಡಿಯೋ ಮಾಡಿಕೊಂಡ ಆರೋಪಿ ಮಹಿಳೆ ರಾತ್ರಿ 10 ಗಂಟೆ ಸುಮಾರಿಗೆ ಮತ್ತೆ ವ್ಯಕ್ತಿಗೆ ಕರೆ ಮಾಡಿ ಹಣ ಕೊಡಲು ವಿಫಲವಾದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ.
ಮರುದಿನ ಮಹಿಳೆಗೆ ಕರೆ ಮಾಡಿದರೂ ಅವರು ಕರೆ ಕಟ್ ಮಾಡಿದ್ದಾರೆ. ಭಯಗೊಂಡ ವ್ಯಕ್ತಿ ಆರಂಭದಲ್ಲಿ 30,000 ರೂ. ನೀಡಿದ್ದಾರೆ. ಸೆ. 5 ರಂದು, ಸಿಬಿಐ ಅಧಿಕಾರಿಯಂತೆ ಪೋಸ್ ನೀಡಿದ ಮತ್ತೊಬ್ಬ ವಂಚಕ, ವ್ಯಕ್ತಿಗೆ ಕರೆ ಮಾಡಿ ವಿಡಿಯೋ ವೈರಲ್ ಆಗಿ ದೂರು ಬಂದಿದೆ. ನಿಮ್ಮನ್ನು ಬಂಧಿಸದಿರಲು ಹಣ ಕೊಡಿ ಎಂದು ಹಣ ಪಡೆದುಕೊಂಡಿದ್ದಾನೆ. ಯೂಟ್ಯೂಬ್ ನಿಂದ ವಿಡಿಯೋ ಅಳಿಸಲು ಹಣ ಕೊಡಿ ಎಂದು ಮತ್ತೊಬ್ಬ ವಂಚಕ ಹಣ ಪಡೆದುಕೊಂಡಿದ್ದಾನೆ. ವಿಡಿಯೋ ಬಹಿರಂಗವಾಗುವ ಭಯದಿಂದ ವ್ಯಕ್ತಿ ಅವರು ಕೇಳಿದಂತೆಲ್ಲಾ ಹಣ ಕೊಟ್ಟು ಕೊನೆಗೆ ಕಂಗಾಲಾಗಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.