ಮುಂಬೈ: ಮುಂಬೈನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿ 1,400 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಕಿಂಗ್ ಪಿನ್ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದಾನೆ. ಇತ್ತೀಚಿನ ದಿನಗಳಲ್ಲಿ ಮುಂಬೈನ ಅತಿದೊಡ್ಡ ಡ್ರಗ್ ಜಪ್ತಿ ಇದಾಗಿದೆ. ಪಾಲ್ಘರ್ ಜಿಲ್ಲೆಯ ನಲಸೊಪಾರಾದಲ್ಲಿ ಡ್ರಗ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ಪೊಲೀಸರು 1,400 ಕೋಟಿ ರೂಪಾಯಿ ಮೌಲ್ಯದ 700 ಕಿಲೋಗ್ರಾಂಗಳಷ್ಟು ಮೆಫೆಡ್ರೋನ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಮುಂಬೈ ಅಪರಾಧ ವಿಭಾಗದ ಆಂಟಿ ನಾರ್ಕೋಟಿಕ್ ಸೆಲ್(ಎ.ಎನ್.ಸಿ.) ಬುಧವಾರ ನಲಸೋಪಾರಾ(ಪಶ್ಚಿಮ) ದಲ್ಲಿರುವ ಘಟಕದಲ್ಲಿ ದಾಳಿ ನಡೆಸಿ ನಿಷಿದ್ಧ ವಸ್ತುಗಳನ್ನು ವಶಪಡಿಸಿಕೊಂಡಿದೆ. ಮೆಫೆಡ್ರೋನ್ ಅನ್ನು ‘ಮಿಯಾಂವ್ ಮಿಯಾವ್’ ಅಥವಾ MD ಎಂದೂ ಕರೆಯುತ್ತಾರೆ, ಇದು ಸಿಂಥೆಟಿಕ್ ಉತ್ತೇಜಕವಾಗಿದ್ದು, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್(NDPS) ಕಾಯಿದೆ ಅಡಿಯಲ್ಲಿ ನಿಷೇಧಿಸಲಾದ ಸೈಕೋಟ್ರೋಪಿಕ್ ವಸ್ತುವಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಸಾವಯವ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದು, ಪ್ರಯೋಗಗಳ ಮೂಲಕ ಮೆಫೆಡ್ರೋನ್ ಉತ್ಪಾದಿಸುವ ಸೂತ್ರವನ್ನು ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.