ವಾಹನ ಚಾಲಕರಿಗೆ ಭಾರೀ ತಲೆನೋವು ಕೊಡುವ ನಗರಗಳ ಪಟ್ಟಿಯಲ್ಲಿ ಮುಂಬೈ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದೇ ಪಟ್ಟಿಯಲ್ಲಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ.
ಬ್ರಿಟನ್ನ ಕಾರು ಶೇರಿಂಗ್ ಕಂಪನಿ ಹಿಯಾಕಾರ್ ಈ ಸಮೀಕ್ಷೆ ನಡೆಸಿದ್ದು, ಜಗತ್ತಿನ 36 ಜನನಿಬಿಡ ನಗರಗಳಲ್ಲಿ ಸಂಚಾರ ದಟ್ಟಣೆ ಯಾವ ಮಟ್ಟದಲ್ಲಿದೆ ಹಾಗೂ ಅಲ್ಲಿನ ಚಾಲಕರಿಗೆ ಅದೆಷ್ಟು ಸವಾಲುಗಳನ್ನು ಒಡ್ಡುತ್ತದೆ ಎಂದು ವರದಿ ಮಾಡಿದೆ.
ನಗರದಲ್ಲಿರುವ ಒಟ್ಟು ವಾಹನಗಳು, ತಲಾ ಕಾರುಗಳ ದರ, ರಸ್ತೆಗಳ ಗುಣಮಟ್ಟ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಆಯ್ಕೆಗಳು, ಪ್ರತಿ ವರ್ಷ ಸಂಭವಿಸುವ ಅಪಘಾತ ಸಂಖ್ಯೆ ಹಾಗೂ ನಗರದ ಜನದಟ್ಟಣೆಯನ್ನು ಪರಿಗಣಿಸಿ ಈ ರ್ಯಾಂಕಿಂಗ್ ನೀಡಲಾಗಿದೆ.
ಪ್ರತಿ ನಗರಕ್ಕೂ ಒಟ್ಟಾರೆ 10 ಅಂಕಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ. ಮುಂಬೈಗೆ 7.4 ಅಂಕಗಳನ್ನು ಸಮೀಕ್ಷೆಯಲ್ಲಿ ನೀಡಲಾಗಿದ್ದರೆ, ದೆಹಲಿಗೆ 5.9 ಅಂಕಗಳನ್ನು ಕೊಡಲಾಗಿದೆ.
ಇದೇ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಬೆಂಗಳೂರಿಗೆ 4.7 ಅಂಕಗಳನ್ನು ನೀಡಲಾಗಿದೆ.
ಮುಂಬೈ ಬಿಟ್ಟರೆ ಪ್ಯಾರಿಸ್, ಜಕಾರ್ತಾ ನಂತರದ ಸ್ಥಾನಗಳಲ್ಲಿದ್ದರೆ, ದೆಹಲಿ ಬಳಿಕ ನ್ಯೂಯಾರ್ಕ್, ಕೌಲಲಂಪುರ, ಜಪಾನ್ನ ನಗೋಯಾ, ಲಂಡನ್, ಮೆಕ್ಸಿಕೋ ಮತ್ತು ಒಸಾಕಾ ನಗರಗಳು ಇವೆ.
ಪೆರು ದೇಶದ ಲಿಮಾ ಈ ಪಟ್ಟಿಯಲ್ಲಿರುವ ಅತ್ಯಂತ ಆರಾಮದಾಯಕ ನಗರವಾಗಿದ್ದು, 2.1 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.