ಕಳ್ಳರನ್ನ ಹಿಡಿಯಲು ಪೊಲೀಸರು ಮಾಡೋ ಕಸರತ್ತುಗಳು ಒಂದೆರೆಡಲ್ಲ. ಈಗ ಪೊಲೀಸರು ಸಿನೆಮಾದಲ್ಲಿ ಕಳ್ಳರನ್ನ ಹಿಡಿಯಲು ಹೇಗೆ ನಾನಾ ವೇಷ ಧರಿಸುತ್ತಾರೋ, ಅದೇ ರೀತಿ ಈಗ ಸರಗಳ್ಳರನ್ನ ಹಿಡಿಯಲು ಜೊಮ್ಯಾಟೊ ಡೆಲಿವರಿ ಬಾಯ್ ಆಗಿ ಸರಗಳ್ಳರನ್ನ ಅರೆಸ್ಟ್ ಮಾಡಿದ್ದಾರೆ.
ಇದು ಕೇಳೋದಕ್ಕೆ ಫಿಲ್ಮಿ ಆದರೂ ಇದೇ ನಿಜ.
ಜುಲೈ ಮತ್ತು ಆಗಸ್ಟ್‌ನಲ್ಲಿ ಮುಂಬೈನ ಕಸ್ತೂರಬಾ ರಸ್ತೆ ಪೊಲೀಸ್ ಠಾಣೆಯಲ್ಲಿ 3 ಮತ್ತು ಬಂಗೂರ್ ನಗರ ಪೊಲೀಸ್ ಠಾಣೆಯಲ್ಲಿ 1 ಸರಗಳ್ಳತನದ ಪ್ರಕರಣಗಳು ವರದಿಯಾಗಿದ್ದವು. ಈ ಸರಗಳ್ಳರನ್ನು ಹೆಡೆಮುರಿ ಕಟ್ಟಲು ಸನ್ನದ್ಧರಾದ ಓಂ ತೋಟವರ್ ಮತ್ತು ರಾಹುಲ್ ವಾಲುಸ್ಕರ್ ಅವರ ನೇತೃತ್ವದ ಪೊಲೀಸ್ ಪಡೆ, 300ಕ್ಕೂ ಅಧಿಕ ಸಿಸಿ ಟಿವಿಗಳನ್ನು ಪರಿಶೀಲಿಸಿದೆ. ಈ ಪರಿಶೀಲನೆ ವೇಳೆ ಅಪರಾಧದಲ್ಲಿ ಬಳಕೆ ಮಾಡಿದ ಬೈಕ್ ಸಹ ಪೊಲೀಸರಿಗೆ ಸಿಕ್ಕಿತ್ತು.
ಹಾಗೆ ಸಿಕ್ಕ ಬೈಕ್‌ನ್ನು ಕಳ್ಳರು ಪಡೆದುಕೊಳ್ಳಲು ಬಂದೇ ಬರುತ್ತಾರೆ ಎಂಬ ನಂಬಿಕೆಯಿಂದ ಅದರ ಪ್ಲಗ್ ಕಿತ್ತು ವಿಠ್ಠಲ್‌ವಾಡಿ ಮತ್ತು ಅಂಬಿವಿಲಿ ಬಳಿ ಇರಿಸಲಾಗಿತ್ತು. ಆ ಬೈಕ್ ಬಳಿ ಪೊಲೀಸ್ ಪಡೆ ಜೊಮ್ಯಾಟೊ ಡೆಲಿವರಿ ಬಾಯ್ ರೀತಿಯ ಬಟ್ಟೆ ಹಾಕಿ ಸುಮಾರು ಮೂರು ದಿನಗಳ ಕಾಲ ಕಾದಿತ್ತು. ಕೊನೆಗೆ ಬೈಕ್ ನೋಡಿದ ವ್ಯಕ್ತಿಯೊಬ್ಬ ಕಿಕ್ ಹೊಡೆಯಲು ಯತ್ನಿಸಿದ್ದಾನೆ. ಇತ್ತ ಪೊಲೀಸ್ ಪಡೆ ಆತನ ಮೇಲೆ ಎರಗಿ ಅವನ್ನು ವಶಕ್ಕೆ ಪಡೆದಿದೆ. ಅದಾಧ ಬಳಿಕ ಅವನನ್ನು ಕಸ್ಟಡಿಗೆ ಪಡೆದು ಬಾಯಿ ಬಿಡಿಸಿದಾಗ, ಇನ್ನೋರ್ವ ಆರೋಪಿಯೂ ಬಲೆಗೆ ಬಿದ್ದಿದ್ದಾನೆ. ಒಟ್ಟಾರೆಯಾಗಿ ಬಂಧಿತರಿಂದ ಎರಡು ಬೈಕ್ ಮತ್ತು ಕೆಲ ಸರಗಳನ್ನು ವಶಕ್ಕೆ ಪಡೆಯಲಾಗಿದೆ.
ಜಾಫರ್ ಯೂಸುಫ್ ಜಾಫ್ರಿ ಮತ್ತು ಫಿರೋಜ್ ನಾಸಿರ್ ಶೇಖ್ ಬಂಧಿತ ಆರೋಪಿಗಳಾಗಿದ್ದು, ಇಬ್ಬರೂ ವಿಠ್ಠಲ್ವಾಡಿ ಮತ್ತು ಅಂಬಿವಿಲಿ ನಿವಾಸಿಗಳಾಗಿದ್ದಾರೆ. ಈ ಇಬ್ಬರು ಕಳ್ಳರು 20ಕ್ಕೂ ಅಧಿಕ ಅಪರಾಧ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಯನ್ನ ಪೊಲೀಸರು ಮಾಧ್ಯಮದ ಮುಂದೆ ಹೇಳಿದ್ದಾರೆ.