ಮುಂಬೈ: ದೇಶದಾದ್ಯಂತ ಜನರು ಹೊಸ ವರ್ಷ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಸಂಭ್ರಮಾಚರಣೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಹೊಸ ವರ್ಷದ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ.
ಮುಂಬೈ ಪೊಲೀಸರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಾಣಿಜ್ಯ ನಗರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂಬೈನಾದ್ಯಂತ ಕಟ್ಟೆಚ್ಚರ ಕೈಗೊಳ್ಳಲಾಗಿದೆ.
ಮುಂಬೈ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಬಂದಿದ್ದು, ಕರೆ ಮಾಡಿರುವ ಅನಾಮಧೇಯ ವ್ಯಕ್ತಿ ಮುಂಬೈನಲ್ಲಿ ಸ್ಫೋಟ ಸಂಭವಿಸಲಿದೆ ಎಂದು ಹೇಳಿದ್ದಾನೆ. ಕರೆ ಬಂದ ತಕ್ಷಣವೇ ಪರಿಶೀಲನೆ ಚುರುಕುಗೊಳಿಸಲಾಗಿದೆ. ಆದರೆ ಈವರೆಗೆ ಎಲ್ಲಿಯೂ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಗೇಟ್ ವೇ ಆಫ್ ಇಂಡಿಯಾ, ಮರೈನ್ ಡ್ರೈವ್, ದಾದರ್, ಬಾಂದ್ರಾ, ಬ್ಯಾಂಡ್ ಶ್ಟ್ಯಾಂಡ್, ಜುಹು, ಮಾಧ್ ಮತ್ತು ಮಾರ್ವೆ ಬೀಚ್ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುಂಬೈನಾದ್ಯಂತ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.