ಮುಂಬೈ: ಆನ್ಲೈನ್ ನಲ್ಲಿ ಮದ್ಯ ಆರ್ಡರ್ ಮಾಡಿದ ವ್ಯಕ್ತಿಯೊಬ್ಬ 3.45 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 62 ವರ್ಷದ ವ್ಯಕ್ತಿ ಆನ್ಲೈನ್ ವಂಚನೆ ಗೆ ಒಳಗಾದವರು. ಅವರು 1220 ರೂಪಾಯಿ ಮೌಲ್ಯದ ಮದ್ಯವನ್ನು ಆರ್ಡರ್ ಮಾಡಿದ್ದು, ತಮಗೆ ಗೊತ್ತಾಗದೇ 3.45 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ನವೆಂಬರ್ 3 ರಂದು ದಹಿಸರ್ ಪೊಲೀಸ್ ಠಾಣೆಗೆ ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ. ಪಿಂಚಣಿಯಿಂದ ಜೀವನ ಸಾಗಿಸುತ್ತಿರುವ ಅವರು ಆನ್ಲೈನ್ ನಲ್ಲಿ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಹುಡುಕಾಡಿದ್ದಾರೆ. ಅದರಲ್ಲಿದ್ದ ಆನ್ಲೈನ್ ಸ್ಟೋರ್ ಗೆ ಕರೆ ಮಾಡಿದಾಗ ಅವರಿಗೆ ಅದು ವಂಚಕರ ನಂಬರ್ ಎನ್ನುವುದು ಗೊತ್ತಾಗಿಲ್ಲ. ಆನ್ಲೈನ್ ಮದ್ಯದ ಅಂಗಡಿಯವನೆಂದು ಹೇಳಿಕೊಂಡ ವ್ಯಕ್ತಿ, ಮುಂಗಡ ಪಾವತಿಸಲು ತಿಳಿಸಿದ್ದಾನೆ. ಮರು ಪಾವತಿಸಲಾಗುವ ಅಡ್ವಾನ್ಸ್ ನೀಡಿ ನೋಂದಣಿ ಮಾಡಿಸಿಕೊಳ್ಳುವಂತೆ ಹೇಳಿ ಮೊದಲಿಗೆ 49 ಸಾವಿರ ರೂಪಾಯಿ ಖಾತೆಗೆ ಹಾಕಿಸಿಕೊಂಡಿದ್ದಾನೆ.
ಮತ್ತೊಮ್ಮೆ ನೀವು ಕಳಿಸಿದ ಹಣ ಸಂದಾಯವಾಗಿಲ್ಲ ಎಂದು ಹೇಳಿ 98,000 ರೂಪಾಯಿ ಹಾಕಿಸಿಕೊಳ್ಳಲಾಗಿದ್ದು, ಹಣ ಬಂದಿಲ್ಲವೆಂದು ಸುಳ್ಳು ಹೇಳಿ ಹಲವು ಸಲ ಹಣ ಪಾವತಿಸಿಕೊಂಡು ಒಟ್ಟು 3.45 ಲಕ್ಷ ರೂ. ಖಾತೆಗೆ ಹಾಕಿಸಿಕೊಂಡಿದ್ದಾನೆ, ಮುಂದಿನ 24 ಗಂಟೆಗಳಲ್ಲಿ ಹಣ ಹಿಂತಿರುಗಿಸುವುದಾಗಿ ಹೇಳಿದ್ದಾನೆ. ಆದರೆ, ಆ ಹಣವನ್ನು ಮರಳಿ ಪಡೆಯುವಲ್ಲಿ ವಿಫಲವಾಗಿ ತಾನು ವಂಚನೆಗೊಳಗಾಗಿರುವುದನ್ನು ತಿಳಿದ ವ್ಯಕ್ತಿ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.