ಮುಂಬೈ: ತನ್ನ ಸಹೋದರಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎರಡು ವರ್ಷದ ಜೈಲಿನಲ್ಲಿದ್ದ ಮುಂಬೈಯ 24 ವರ್ಷದ ಯುವಕನನ್ನು ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಲು ಸೂಚಿಸಿದೆ.
ಸಹೋದರನ ಮೇಲೆ ಅತ್ಯಾಚಾರ ಆರೋಪ ಮಾಡಿದ್ದ ಹುಡುಗಿ ಎರಡು ವರ್ಷಗಳ ನಂತರ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾಳೆ. ತನ್ನ ಗೆಳೆಯನೊಂದಿಗೆ ಹೊರಗೆ ಹೋಗಿದ್ದಕ್ಕಾಗಿ ಸಹೋದರ ಗದರಿಸಿದ್ದ ಕಾರಣ ಅತ್ಯಾಚಾರ ಆರೋಪ ಮಾಡಿದ್ದಾಗಿ ತಿಳಿಸಿದ್ದಾಳೆ.
ದಿಂದೋಶಿಯ ವಿಶೇಷ ನ್ಯಾಯಾಲಯವು ಅತ್ಯಾಚಾರದ ಆರೋಪ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ಸೆಕ್ಷನ್ ಗಳಿಂದ ಯುವಕನನ್ನು ಮುಕ್ತಗೊಳಿಸಿದೆ.
ಪೋಷಕರು ಮನೆಯಲ್ಲಿ ಇಲ್ಲದಿದ್ದಾಗ ಸಹೋದರ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಹುಡುಗಿ ಹೇಳಿದಾಗ 2019 ರಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಹುಡುಗಿ ತನ್ನ ಹೊಸ ಹೇಳಿಕೆಯಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಎಫ್‌ಐಆರ್‌ನ ವಿಷಯಗಳನ್ನು ನಿರಾಕರಿಸಿದ್ದಾಳೆ. ಆಸ್ಪತ್ರೆಯಲ್ಲಿ ಯಾವುದೇ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿಲ್ಲ ಎಂದು ಅವಳು ಹೇಳಿದ್ದು, ಅತ್ಯಾಚಾರ ನಡೆದಿರುವುದನ್ನು ನಿರಾಕರಿಸಿದ್ದಾಳೆ.
ನ್ಯಾಯಾಲಯವು ಹುಡುಗಿಯ ಸಾಕ್ಷ್ಯವು ನಂಬಲರ್ಹವಲ್ಲ. ಏಕೆಂದರೆ ಅದು ವಿರೋಧಾಭಾಸ, ಲೋಪಗಳಿಂದ ಕೂಡಿದೆ ಎಂದಿದ್ದು, ಘಟನೆ ನಡೆದ ಸಮಯದಲ್ಲಿ 2018 ರಲ್ಲಿ ಬಾಲಕಿ ಅಪ್ರಾಪ್ತ ವಯಸ್ಕಳು ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದೂ ಹೇಳಿದೆ.