ಮುಂಬೈನ ಸ್ಥಳೀಯ ರೈಲು ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ವ್ಯಕ್ತಿಯೊಬ್ಬರು ರೈಲ್ವೆ ಹಳಿಗಳಿಂದ ನಾಯಿಯನ್ನು ರಕ್ಷಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಮುಂಬೈ ಮೇರಿ ಜಾನ್ ಎಂಬ ಖಾತೆಯಿಂದ ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಈ ವಿಡಿಯೋದ ಬಗ್ಗೆ ನಿಖರವಾದ ಸ್ಥಳದ ಯಾವುದೇ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ. ಆದರೆ, ಮಹಾರಾಷ್ಟ್ರ ರಾಜಧಾನಿ ಮುಂಬೈನ ಜನನಿಬಿಡ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ರೈಲು ಬರುತ್ತಿದ್ದಂತೆಯೇ ಜನರು ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿರುವುದು ಕಂಡುಬಂದಿತು. ಆದರೆ, ಇದರ ಮಧ್ಯೆ ಬೀದಿ ನಾಯಿಯೊಂದು ಹಳಿಗಳ ಮೇಲೆ ಅಡ್ಡಾಡುತ್ತಿತ್ತು.
ಸ್ವಲ್ಪ ಸಮಯದ ನಂತರ, ವ್ಯಕ್ತಿಯೊಬ್ಬ ಹಳಿಗಳ ಮೇಲೆ ಹಾರಿ ನಾಯಿಯನ್ನು ಎತ್ತಿಕೊಂಡು ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ಜನರಿಗೆ ಒಪ್ಪಿಸಿದ್ದಾನೆ. ಇದೆಲ್ಲವೂ ಕೆಲವೇ ಸೆಕೆಂಡುಗಳಲ್ಲಿ ಸಂಭವಿಸಿದೆ. ರೈಲು ಸಮೀಪಿಸುತ್ತಿದ್ದಂತೆ ವ್ಯಕ್ತಿಯು ನಾಯಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದ್ರು. ನಂತರ, ಜನರು ಟ್ರ್ಯಾಕ್‌ಗಳಿಂದ ಪ್ಲಾಟ್‌ಫಾರ್ಮ್‌ಗೆ ಏರಲು ವ್ಯಕ್ತಿಗೆ ಸಹಾಯ ಮಾಡಿದ್ದಾರೆ.
ನಾಯಿಯನ್ನು ರಕ್ಷಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ. ಇನ್ನು ಹಲವಾರು ಮಂದಿ ರೈಲನ್ನು ನಿಧಾನಗೊಳಿಸಿದ್ದಕ್ಕಾಗಿ ಮೋಟರ್‌ಮ್ಯಾನ್‌ನನ್ನು ಶ್ಲಾಘಿಸಿದ್ದಾರೆ.
ಏತನ್ಮಧ್ಯೆ, ಮುಂಬೈ ಉಪನಗರ ರೈಲ್ವೆ ನೆಟ್‌ವರ್ಕ್‌ನ ಪಶ್ಚಿಮ ಮಾರ್ಗದಲ್ಲಿರುವ ನಲಾ ಸೋಪಾರಾ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ ಎಂದು ಕಾಮೆಂಟ್‌ಗಳ ವಿಭಾಗದಲ್ಲಿ ಕೆಲವರು ಗಮನ ಸೆಳೆದಿದ್ದಾರೆ.