60 ವರ್ಷದ ವೃದ್ಧರೊಬ್ಬರು ಜಾಗಿಂಗ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮುಂಬೈನ ಮರೀನ್ ಡ್ರೈವ್ ನಲ್ಲಿ ನಡೆದಿದೆ. ಇವರು ಸದ್ಯದಲ್ಲೇ ನಡೆಯುವ ಮ್ಯಾರಥಾನ್ ಗೆ ಸಿದ್ಧತೆ ನಡೆಸುತ್ತಿರುವಾಗ ಈ ಘಟನೆ ನಡೆದಿದೆ.
ನವಿ ಮುಂಬೈನ ಸೀ ವುಡ್ಸ್ ನಿವಾಸಿ ರಾಜೇಂದ್ರ ರಾಮಕೃಷ್ಣ ಬಿಸೆ ಮೃತಪಟ್ಟವರಾಗಿದ್ದು, ಇವರು ಮ್ಯಾರಥಾನ್ ಗೆ ಅಭ್ಯಾಸ ಮಾಡುವ ಸಲುವಾಗಿ ಮರೀನ್ ಡ್ರೈವ್ ಗೆ ಆಗಮಿಸಿದ್ದರು ಎನ್ನಲಾಗಿದೆ.
ಮಂತ್ರಾಲಯದಲ್ಲಿ ಕೇಂದ್ರ ಸರ್ಕಾರಿ ನೌಕರರಾಗಿ ಕಾರ್ಯ ನಿರ್ವಹಿಸಿದ್ದ ಇವರು ನಿವೃತ್ತರಾಗಿದ್ದು, ಮುಂಬೈನಲ್ಲಿ ನೆಲೆಸಿದ್ದರು. ಭಾನುವಾರ ಬೆಳಗ್ಗೆ ಜಾಗಿಂಗ್ ಮಾಡುವಾಗ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಸಮೀಪದ ಸೈಫಿ ಹಾಸ್ಪಿಟಲ್ ಗೆ ಕರೆದೊಯ್ಯಲಾಗಿದ್ದು, ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.