ವಿಲಕ್ಷಣ ಘಟನೆಯೊಂದರಲ್ಲಿ ಕಳೆದುಹೋದ ತನ್ನ ಫೋನ್ ಹುಡುಕಲು ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶಿಸಲು ನಕಲಿ ಟಿಕೆಟ್ ಸೃಷ್ಟಿಸಿದ ಆರೋಪದ ಮೇಲೆ ಮುಂಬೈ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಒಂದು ವಾರದ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ತನ್ನ ಫೋನ್ ಕಳೆದುಹೋಗಿದೆ ಎಂದು ಹೇಳಿಕೊಂಡಿರುವ ವ್ಯಕ್ತಿ ಅಂದಿನಿಂದ ಅದನ್ನು ಹುಡುಕಲು ಪ್ರಯತ್ನಿಸುತ್ತಿದ್ದ. ಆದಾಗ್ಯೂ ಅವನು ವಿಮಾನ ನಿಲ್ದಾಣಕ್ಕೆ ಪ್ರವೇಶ ಪಡೆಯಲು ಅಧಿಕೃತ ಮಾರ್ಗವನ್ನು ಆರಿಸಿಕೊಳ್ಳದೇ ಒಳಗೆ ಹೋಗಿ ತನ್ನ ಫೋನ್ ಅನ್ನು ಹುಡುಕಲು ನಕಲಿ ಟಿಕೆಟ್ ಸೃಷ್ಟಿಸಿದ್ದ.
ಈ ಕೃತ್ಯವೆಸಗಿದ ಅಂಧೇರಿಯ ಮರೋಲ್‌ನ 37 ವರ್ಷದ ನೂರ್ ಆಲಂ ಮೊಹಮ್ಮದ್ ಕಯ್ಯುಮ್ ಶೇಖ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಒಂದು ವಾರದ ಹಿಂದೆ ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡ ಫೋನ್ ಪತ್ತೆಹಚ್ಚುವುದು ಆತನ ಉದ್ದೇಶವಾಗಿತ್ತು. ಆದರೆ ಇದಕ್ಕಾಗಿ ನಕಲಿ ಟಿಕೆಟ್ ಸೃಷ್ಟಿಸಿದ್ದರಿಂದ ಈಗ ಏಳು ವರ್ಷಗಳ ಗರಿಷ್ಠ ಜೈಲು ಶಿಕ್ಷೆಯನ್ನು ಹೊಂದಿರುವ ಜಾಮೀನು ರಹಿತ ಆರೋಪಗಳನ್ನು ಒಳಗೊಂಡಂತೆ ತೀವ್ರವಾದ ಕಾನೂನು ಪರಿಣಾಮಗಳನ್ನು ಎದುರಿಸಲಿದ್ದಾನೆ.
ಆರೋಪಿ ನೂರ್ ಆಲಂ ಮೊಹಮ್ಮದ್ ಕಯ್ಯುಮ್ ಶೇಖ್ ಮುಂಬೈನಿಂದ ದೆಹಲಿಗೆ ಹೋಗುವ UK950 ವಿಮಾನಕ್ಕೆ ವಿಮಾನ ಟಿಕೆಟ್ ತೋರಿಸುವ ಮೂಲಕ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶಕ್ಕೆ ಯಶಸ್ವಿಯಾಗಿ ಪ್ರವೇಶ ಪಡೆದಿದ್ದ. ಆದರೆ ಅವನ ಟಿಕೆಟ್ ಅನ್ನು ವಿಸ್ತಾರಾ ಸಿಬ್ಬಂದಿ ಮರುಪರಿಶೀಲಿಸಿದಾಗ, ಯಾವುದೇ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಯು ಅಂತಹ ಟಿಕೆಟ್ ನೀಡಿಲ್ಲ ಎಂದು ಕಂಡುಬಂದಿದೆ. ಅದು ನಕಲಿ ಟಿಕೆಟ್ ಎಂಬುದು ದೃಢಪಟ್ಟಿತ್ತು.
ಸಿಕ್ಕಿಬಿದ್ದ ನಂತರ ಆರೋಪಿ ನೂರ್ ಆಲಂ ಮೊಹಮ್ಮದ್ ಕಯ್ಯುಮ್ ಶೇಖ್ ನನ್ನು ಸಂಪೂರ್ಣ ವಿಚಾರಣೆಗಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ವರ್ಗಾಯಿಸಲಾಯಿತು. ಬಳಿಕ ಸಿಐಎಸ್‌ಎಫ್ ಅವನನ್ನು ಸಹರ್ ಪೊಲೀಸರಿಗೆ ಒಪ್ಪಿಸಿ ಔಪಚಾರಿಕ ದೂರು ದಾಖಲಿಸಿದೆ.
ತನಿಖೆಯ ಪ್ರಕ್ರಿಯೆಯಲ್ಲಿ ಆರೋಪಿ ಒಂದು ವಾರದ ಹಿಂದೆ ಮುಂಬೈನಿಂದ ದೆಹಲಿಗೆ ಯುಕೆ 950 ವಿಮಾನದಲ್ಲಿ ಪ್ರಯಾಣಿಸುವಾಗ ವಿಮಾನ ನಿಲ್ದಾಣದಲ್ಲಿ ತನ್ನ ಮೊಬೈಲ್ ಫೋನ್ ಕಳೆದುಕೊಂಡಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಹೆಚ್ಚಿನ ಕೆಲಸದ ಹೊರೆಯಿಂದಾಗಿ ಆ ಸಮಯದಲ್ಲಿ ತನ್ನ ಫೋನ್ ಕಳೆದುಹೋದ ಬಗ್ಗೆ ವರದಿ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾನೆ.