ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧ ಆಕ್ಷೇಪಾರ್ಹ ವಿಷಯಗಳನ್ನು ತಿಳಿಸುವ ಅವಹೇಳನಕಾರಿ ವಿಡಿಯೋವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಫೇಸ್ ಬುಕ್ ಬಳಕೆದಾರರ ವಿರುದ್ಧ ಪೊಲೀಸರು ಕ್ರಿಮಿನಲ್ ಅಪರಾಧ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಆರು ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಸಂಬಂಧಿತ ಪೋಸ್ಟ್‌ಗಳ 466 ಪ್ರಕರಣಗಳು ರಾಜ್ಯಾದ್ಯಂತ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಥಾಣೆಯ ನೌಪದ ಪೊಲೀಸರ ಪ್ರಕಾರ, ಈ ಪ್ರಕರಣದ ದೂರುದಾರರು ಭಾರತೀಯ ಜನತಾ ಪಕ್ಷದ(ಬಿಜೆಪಿ) ಸಾಮಾಜಿಕ ಮಾಧ್ಯಮ ವಿಭಾಗದ ಪದಾಧಿಕಾರಿಯಾಗಿದ್ದಾರೆ.
ದೂರುದಾರರ ಪ್ರಕಾರ, ಜನವರಿ 10 ರಂದು, ಬಿಜೆಪಿ ನಾಯಕಿಯೊಬ್ಬರು ಅವರು ಸ್ವೀಕರಿಸಿದ ಫೇಸ್‌ಬುಕ್ ಲಿಂಕ್ ಅನ್ನು ದೂರುದಾರರಿಗೆ ಹಂಚಿಕೊಂಡಿದ್ದಾರೆ. ಈ ಲಿಂಕ್‌ನಲ್ಲಿ 29 ಸೆಕೆಂಡುಗಳ ವಿಡಿಯೋ ಇದೆ, ಇದರಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಬಗ್ಗೆ ಆಕ್ಷೇಪಾರ್ಹ ವಿಷಯಗಳನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೂರುದಾರರು ಇತರ ಬಿಜೆಪಿ ಕಾರ್ಯಕರ್ತರೊಂದಿಗೆ ಪೊಲೀಸರನ್ನು ಸಂಪರ್ಕಿಸಿ ಈ ವಿಷಯದ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ನೌಪಾದ ನಿವಾಸಿಯೊಬ್ಬರು ತಮ್ಮ ಎಫ್‌ಬಿ ಪ್ರೊಫೈಲ್‌ನಲ್ಲಿ ಈ ವಿಡಿಯೊ ಹಾಕಿದ್ದಾರೆ ಎಂದು ತಿಳಿದುಬಂದಿದೆ. ತನಿಖೆ ನಡೆಸಲಾಗುತ್ತಿದೆ. ಮಂಗಳವಾರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504(ಉದ್ದೇಶಪೂರ್ವಕ ಅವಮಾನ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 ಸಿ(ಗುರುತಿನ ಕಳ್ಳತನಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.