ಮುಂಬೈ: ಉದ್ಯೋಗ ಕೊಡಿಸುವ ನೆಪದಲ್ಲಿ 24 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಗರದ ವರ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಂಧಿತ ಆರೋಪಿಯನ್ನು ಜೋಸೆಫ್ ಜೇಮ್ಸ್(50) ಎಂದು ಗುರುತಿಸಲಾಗಿದೆ.
ವರ್ಲಿ ಪೊಲೀಸರ ಪ್ರಕಾರ, ಸಂತ್ರಸ್ತ ಯುವತಿ ಥಾಣೆ ನಿವಾಸಿಯಾಗಿದ್ದು, ಕೆಲಸ ಹುಡುಕುತ್ತಿದ್ದಳು, ತನ್ನ ಪುರುಷ ಸ್ನೇಹಿತರೊಬ್ಬರಿಂದ ಸಹಾಯ ಕೇಳಿದ್ದಳು. ಸಂತ್ರಸ್ತ ಮಹಿಳೆಯ ಸ್ನೇಹಿತ ಜೋಸೆಫ್ ಎಂಬ ವ್ಯಕ್ತಿಯ ಮೊಬೈಲ್ ನಂಬರ್ ನೀಡಿ ಆತನನ್ನು ಸಂಪರ್ಕಿಸುವಂತೆ ಸೂಚಿಸಿದ್ದರು.
ಗುರುವಾರ ಸಂಜೆ ಸಂತ್ರಸ್ತೆಯ ಸ್ನೇಹಿತ ಕರೆ ಮಾಡಿ ಜೋಸೆಫ್ ಆಕೆಯನ್ನು ಖಾರ್‌ನಲ್ಲಿ ಭೇಟಿಯಾಗಲು ತಿಳಿಸಿದ್ದಾರೆ ಎಂದಿದ್ದರು. ಸಂತ್ರಸ್ತೆ ಖಾರ್ ಗೆ ಹೋದಾಗ ಅಲ್ಲಿ ಆಕೆಯ ಸ್ನೇಹಿತ ಮತ್ತು ಜೋಸೆಫ್ ಸೇರಿಕೊಂಡರು. ನಂತರ ಮೂವರು ಹೋಟೆಲ್ ಗೆ ಹೋಗಿ ಮದ್ಯ ಸೇವಿಸಿ, ಮಧ್ಯರಾತ್ರಿಯ ಸುಮಾರಿಗೆ ತಮ್ಮ ಮನೆಗಳಿಗೆ ಹೊರಟಿದ್ದಾರೆ.
ಜೋಸೆಫ್ ತನ್ನ ಕಾರ್ ನಲ್ಲಿ ಖಾರ್ ಸ್ಟೇಷನ್ ಗೆ ಯುವತಿಯನ್ನು ಬಿಡುವುದಾಗಿ ಹೇಳಿದ್ದಾನೆ. ಆದರೆ ಅವನು ನಿಲ್ದಾಣಕ್ಕೆ ಕರೆದೊಯ್ಯಲಿಲ್ಲ, ಈ ಹೊತ್ತಿಗೆ ಯಾವುದೇ ರೈಲುಗಳು ಇರುವುದಿಲ್ಲ ಎಂದು ಕಾರ್ ನಲ್ಲೇ ಮಲಗಿಸಿಕೊಂಡಿದ್ದಾನೆ. ಕಾರ್ ನಲ್ಲಿ ಮಲಗಿದ್ದಾಗ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಜೋಸೆಫ್ ಕಿರುಕುಳ ನೀಡಲು ಆರಂಭಿಸಿದ್ದ. ಆಕೆ ಪ್ರತಿಭಟಿಸಿದಾಗ ಬಲವಂತವಾಗಿ ಬಟ್ಟೆ ತೆಗೆದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.
ನಂತರ ಘಟನೆಯ ಬಗ್ಗೆ ಯಾರೊಂದಿಗೂ ಮಾತನಾಡದಂತೆ ಜೋಸೆಫ್ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆ ತನ್ನ ವಕೀಲ ಸ್ನೇಹಿತನಿಗೆ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾಳೆ. ಅವರು ತಕ್ಷಣ ದೂರು ನೀಡುವಂತೆ ಸಲಹೆ ನೀಡಿದ್ದು, ನಂತರ ಅವರು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಸಂತ್ರಸ್ತೆಯ ದೂರಿನ ಮೇರೆಗೆ ವರ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.