ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳಿದ್ದಾರೆ. ಚೀನಾ ರಾಜಧಾನಿ ಬೀಜಿಂಗ್ ಅನ್ನು ಹಿಂದಿಕ್ಕಿದ ಮುಂಬೈನಲ್ಲಿ ಒಟ್ಟು 92 ಶತಕೋಟ್ಯಧಿಪತಿಗಳು ಇದ್ದಾರೆ ಎಂದು ಹರೂನ್ ಜಾಗತಿಕ ಶ್ರೀಮಂತರ ಪಟ್ಟಿ ತಿಳಿಸಿದೆ.
ಬೀಜಿಂಗ್ ನಲ್ಲಿ 91 ಬಿಲಿಯನೇರ್ ಗಳಿದ್ದಾರೆ. ಮುಂಬೈನಲ್ಲಿ ಒಂದು ವರ್ಷದ ಅವಧಿಯಲ್ಲಿ 26 ಹೊಸ ಬಿಲಿಯನೇರ್ ಗಳು ಸೇರ್ಪಡೆಯಾಗಿದ್ದಾರೆ. ಭಾರತದಲ್ಲಿ ಒಟ್ಟು 271, ಚೀನಾದಲ್ಲಿ 814 ಬಿಲಿಯನೇರ್ ಗಳು ಇದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು 119 ಬಿಲಿಯನೇರ್ ಗಳು ನ್ಯೂಯಾರ್ಕ್ ನಲ್ಲಿದ್ದಾರೆ. 97 ಶತಕೋಟ್ಯಾಧಿಪತಿಗಳು ಇರುವ ಲಂಡನ್ ಎರಡನೇ ಸ್ಥಾನದಲ್ಲಿದೆ. ಮುಂಬೈ ಅತಿ ಹೆಚ್ಚು ಶ್ರೀಮಂತರನ್ನು ಹೊಂದಿರುವ ಜಾಗತಿಕ ಮೂರನೇ ಅತಿ ದೊಡ್ಡ ನಗರವಾಗಿದೆ.
ಜಗತ್ತಿನಲ್ಲಿ ಒಟ್ಟಾರೆ 3279 ಬಿಲಿಯನೇರ್ ಗಳನ್ನು ಗುರುತಿಸಲಾಗಿದೆ. 115 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಮುಕೇಶ್ ಅಂಬಾನಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೂಸ್, ಫ್ರೆಂಚ್ ಉದ್ಯಮಿ ಬರ್ನಾಡ್ ಅರ್ನಾಲ್ಟ್ ಅವರಿದ್ದಾರೆ.