ಮುಂಬೈನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಬಾಂದ್ರಾ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ನೀರಿನ ಟ್ಯಾಂಕರ್ ಅತಿವೇಗದಲ್ಲಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಶಿವಾನಿ ಸಿಂಗ್ ಎಂಬ ರೂಪದರ್ಶಿ ಸಾವನ್ನಪ್ಪಿದ್ದಾಳೆ.
ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಂದ್ರಾ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಟ್ಯಾಂಕರ್ ಚಾಲಕನಿಗಾಗಿ ಶೋಧ ನಡೆಸಿದ್ದಾರೆ.
ಮೃತ ಶಿವಾನಿ ಸಿಂಗ್ ಮಲಾಡ್ ನಿವಾಸಿಯಾಗಿದ್ದಾರೆ. ನೀರಿನ ಟ್ಯಾಂಕರ್ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಘಟನೆ ನಡೆದ ತಕ್ಷಣ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಾನಿ ಮತ್ತು ಆಕೆಯ ಸ್ನೇಹಿತ ಬಾಂದ್ರಾದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಸ್ತೆಗೆ ರಾತ್ರಿ 8 ಗಂಟೆ ಸುಮಾರಿಗೆ ಮೋಟಾರ್ ಸೈಕಲ್ ನಲ್ಲಿ ಬಂದಿದ್ದಾಗ ಟ್ಯಾಂಕರ್ ಅತಿವೇಗದಲ್ಲಿ ಬಂದು ಅವರಿಗೆ ಡಿಕ್ಕಿ ಹೊಡೆದಿದೆ. ಶಿವಾನಿ ದ್ವಿಚಕ್ರ ವಾಹನದಿಂದ ಹಾರಿ ಬಿದ್ದಿದ್ದಾರೆ. ಆಕೆಯನ್ನು ಸಮೀಪದ ಭಾಭಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಆರೋಪಿ ವಾಹನ ಪತ್ತೆಗೆ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.