ದುಬಾರಿ ಫ್ಯಾಷನ್ ಬ್ರ್ಯಾಂಡ್ ಚರಗ್ ದಿನ್ ಮಾಲೀಕರಿಗೆ 22 ವರ್ಷಗಳ ನಂತರ ಕಳ್ಳತನವಾಗಿದ್ದ ಎಂಟು ಕೋಟಿ ರೂ. ಮೌಲ್ಯದ ಒಡವೆಗಳು ವಾಪಸ್ಸು ದೊರತಿವೆ. 1998 ರಲ್ಲಿ ಕಳ್ಳತನವಾಗಿದ್ದ ಒಡವೆಗಳು ಕಳ್ಳರನ್ನ ಹಿಡಿದ ಮೇಲೆ ಮುಂದಿನ ತನಿಖೆಗಾಗಿ ಪೊಲೀಸರ ಬಳಿಯೆ ಉಳಿದಿದ್ದವು. ಒಡವೆಗಳನ್ನ ವಾಪಸ್ಸು ಮಾಡುವಂತೆ, ಚರಗ್ ದಿನ್ ಸಂಸ್ಥಾಪಕ ಅರ್ಜನ್ ದಾಸ್ವಾನಿ ಅವರ ಪುತ್ರ ರಾಜು ದಾಸ್ವಾನಿ ನ್ಯಾಯಾಲಕ್ಕೆ ಮನವಿ ಮಾಡಿದ್ದರು. ಅಲ್ಲದೇ ಒಡವೆಗಳನ್ನು ಖರೀದಿಸಿದ್ದ ಬಿಲ್ ಮತ್ತು ರಶೀದಿಗಳನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಜನವರಿ 5ನೇ ತಾರೀಖಿನಂದು ಮುಂಬೈನ ಸೆಷನ್ಸ್ ಕೋರ್ಟ್, ಕದ್ದ ಒಡವೆಗಳನ್ನ ದಾಸ್ವಾನಿ ಕುಟುಂಬಕ್ಕೆ ವಾಪಾಸ್ಸು ನೀಡಲು ಆದೇಶಿಸಿದೆ. ರಾಣಿ ವಿಕ್ಟೋರಿಯಾ ಅವರ ಚಿತ್ರವಿರುವ ಚಿನ್ನದ ನಾಣ್ಯ, 100 ಗ್ರಾಂ ಮತ್ತು 200 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು ಸೇರಿದಂತೆ ಒಟ್ಟು ಎಂಟು ಕೋಟಿ ಮೌಲ್ಯದ ಚಿನ್ನವನ್ನ ದಾಸ್ವಾನಿ ಕುಟುಂಬ ಮರುಪಡೆದಿದೆ. ಕದ್ದಾಗ ಅಂದರೆ 22 ವರ್ಷಗಳ ಹಿಂದೆ ಈ ಒಡವೆಗಳಿಗೆ 13 ಲಕ್ಷ ರೂಪಾಯಿ ಮೌಲ್ಯವಿತ್ತು.
ಮೇ 8, 1998 ರಂದು ಚಾಕು ಹಿಡಿದುಕೊಂಡು ಬಂದ ಗುಂಪೊಂದು, ಕೊಲಾಬಾದಲ್ಲಿರುವ ಅರ್ಜನ್ ದಾಸ್ವಾನಿ ಅವರ ಮನೆಯಿಂದ ಚಿನ್ನ ಕದ್ದಿದ್ದರು. ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಸೇಫ್‌ನ ಕೀಗಳನ್ನು ತೆಗೆದುಕೊಂಡು ದಾಸ್ವಾನಿ ಮತ್ತು ಅವರ ಪತ್ನಿಯನ್ನು ಕಟ್ಟಿಹಾಕಿ ಸುಲಿಗೆ ನಡೆಸಲಾಗಿತ್ತು.
ದೂರು ನೀಡಿದ ನಂತರ ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಯಿತು ಮತ್ತು ಲೂಟಿಯ ಒಂದು ಭಾಗವನ್ನು 1998 ರಲ್ಲಿ ವಶಪಡಿಸಿಕೊಳ್ಳಲಾಯಿತು. 1999 ರ ವಿಚಾರಣೆಯಲ್ಲಿ ಮೂವರನ್ನು ಖುಲಾಸೆಗೊಳಿಸಲಾಯಿತು. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಹೀಗಾಗಿ ಕದ್ದ ಚಿನ್ನ ಪೊಲೀಸರ ಬಳಿಯೇ ಉಳಿಯಿತು.
ವಶಪಡಿಸಿಕೊಂಡ ವಸ್ತುಗಳನ್ನ, ವಿಶೇಷವಾಗಿ ಚಿನ್ನವನ್ನ ಪೊಲೀಸರ ವಶದಲ್ಲಿ ಇಟ್ಟುಕೊಂಡಿರುವುದರಿಂದ ಯಾವುದೇ ಪ್ರಯೋಜನವಾಗಿಲ್ಲ. ಪ್ರಕರಣ ಶುರುವಾಗಿ 19 ವರ್ಷಗಳೇ ಕಳೆದಿದೆ. ಈ ಪ್ರಕರಣದಲ್ಲಿ, ಯಾವುದೇ ಪ್ರಗತಿಯಾಗಿಲ್ಲ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನವಾಗಿಲ್ಲ. ದೂರುದಾರರು ತಮ್ಮ ಸ್ವಂತ ಆಸ್ತಿ ವಾಪಸ್‌ಗಾಗಿ ವರ್ಷಗಟ್ಟಲೆ ಕಾಯುವಂತೆ ಕೇಳಿದರೆ, ಅದು ನ್ಯಾಯದ ಅಣಕು ಮತ್ತು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ, ಎಂದು ಆದೇಶದಲ್ಲಿ ಹೇಳಲಾಗಿದೆ.