ಮುಂಬೈ: ನೌಕಾಪಡೆಯ ಸಿಬ್ಬಂದಿಯೊಬ್ಬ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಳೆದ ತಿಂಗಳು ನಡೆದಿದ್ದು, ಮೇ 17 ರಂದು ಸಂತ್ರಸ್ತೆ ದೂರು ನೀಡಿದ ನಂತರ ಬೆಳಕಿಗೆ ಬಂದಿದೆ.
ಮುಂಬೈನ ಕಫ್ ಪೆರೇಡರ್ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಮಹಿಳೆಯ ಪತಿ ಮತ್ತು ಆತನ ಸಹೋದ್ಯೋಗಿ ಅವಿವಾಹಿತನಾಗಿರುವ ಆರೋಪಿ ಕಳೆದ ವರ್ಷ ಮುಂಬೈನ ಕೊಲಾಬಾ ಪ್ರದೇಶದಲ್ಲಿ ಬಾಡಿಗೆಗೆ ಅಪಾರ್ಟ್ಮೆಂಟ್ ಪಡೆದುಕೊಂಡಿದ್ದರು.
ಮಹಿಳೆಯ ಪತಿ ತರಬೇತಿಗಾಗಿ ಕೇರಳಕ್ಕೆ ಹೋಗಿದ್ದರು. ಏಪ್ರಿಲ್ 29 ರಂದು ಆರೋಪಿ ತನಗೆ ಬಡ್ತಿ ಸಿಕ್ಕಿರುವುದಾಗಿ ತಿಳಿಸಿ ಮಹಿಳೆಗೆ ದುಬೈನಿಂದ ತರಿಸಿದ ಚಾಕೊಲೇಟ್ ಕೊಟ್ಟಿದ್ದಾನೆ. ಇದೇ ವೇಳೆ ಕೆಲವು ಪಾನೀಯಗಳನ್ನು ಕುಡಿದಿದ್ದಾರೆ. ನಂತರ ಮಹಿಳೆಗೆ ತಲೆನೋವು ಕಾಣಿಸಿಕೊಂಡಿದೆ. ಮಹಿಳೆ ನೋವು ನಿವಾರಕ ಮಾತ್ರೆ ತೆಗೆದುಕೊಂಡಿದ್ದಾಳೆ.
ಇದೇ ವೇಳೆ ತಲೆಗೆ ಮಸಾಜ್ ಮಾಡುವ ನೆಪದಲ್ಲಿ ಆಕೆಯ ಕೋಣೆಗೆ ಪ್ರವೇಶಿಸಿದ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಪತಿಗೆ ತಿಳಿಸುವುದಾಗಿ ಮಹಿಳೆ ಆರೋಪಿಗೆ ಹೇಳಿದ್ದು, ಮಹಿಳೆಯನ್ನು ಗುಂಡಿಕ್ಕಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗಂಡನಿಗೆ ತಿಳಿಸುತ್ತೇನೆ ಎಂದು ಬೆದರಿಸಿದ್ದಾನೆ. ಇದರಿಂದ ಭಯಗೊಂಡ ಮಹಿಳೆ ವಿಷಯವನ್ನು ಬಹಿರಂಗಪಡಿಸಿಲ್ಲ. ಯಾರಿಗಾದರರೂ ಹೇಳಿದರೆ ತನ್ನನ್ನು ಕೊಲೆ ಮಾಡಿ ಗಂಡನಿಗೆ ತಪ್ಪಾಗಿ ಮಾಹಿತಿ ನೀಡುತ್ತಾನೆ ಎಂದು ಸುಮ್ಮನಾಗಿದ್ದಾಳೆ.
ಇತ್ತೀಚೆಗೆ ಗಂಡ ತರಬೇತಿ ಮುಗಿಸಿ ಬಂದ ನಂತರ ಆತನಿಗೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.