ಹತ್ತು ವರ್ಷದ ಬಾಲಕಿಯೊಬ್ಬಳ ಹೊಟ್ಟೆ ಸೇರಿದ್ದ 100 ಗ್ರಾಂನಷ್ಟು ಕೇಶದುಂಡೆಯನ್ನು ಮುಂಬೈ ದಾದರ್‌ನ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದಾರೆ.
ಕೂದಲು ಕಿತ್ತು ನುಂಗುವ ಅಭ್ಯಾಸ ಮಾಡಿಕೊಂಡಿದ್ದ ಕಿಯಾರಾ ಬನ್ಸಾಲ್ ಹೆಸರಿನ ಈ ಬಾಲಕಿ ’ಟ್ರೈಕೋಫಾಗಿಯಾಸ್’ ಎಂಬ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದಳು. ಈ ಸಮಸ್ಯೆಗೆ ಸಿಲುಕುವ ಮಂದಿಗೆ ಕೂದಲು ಕಿತ್ತು ತಿನ್ನುವ ಚಟ ಅಂಟಿಕೊಂಡಿರುತ್ತದೆ.
ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಬಾಲಕಿಯನ್ನು ಇಲ್ಲಿನ ಬಾಯ್ ಜೆರ್ಬಾಯ್ ವಾಡಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಮಕ್ಕಳ ತಜ್ಞ ಪರಾಗ್ ಕರ್ಕೆರಾ ವೈದ್ಯಕೀಯ ತಪಾಸಣೆ ಮಾಡಿದ ಕೂಡಲೇ ಬಾಲಕಿಯ ಹೊಟ್ಟೆಯಲ್ಲಿ ಕೇಶದುಂಡೆ ಬೆಳೆದಿರುವುದು ಕಂಡು ಬಂದಿದೆ.
ಕೂದಲು ಜೀರ್ಣವಾಗದ ಕಾರಣ ಅದು ಜೀರ್ಣಾಂಗ ವ್ಯವಸ್ಥೆಯಲ್ಲಿ ಹಾಗೇ ಉಳಿದು ಬಿಡುತ್ತದೆ. ಈ ಬಾಲಕಿಯ ವಿಚಾರದಲ್ಲಿ, ಕೂದಲು ಆಕೆಯ ಸಣ್ಣ ಕರುಳಿನ ಮೊದಲ ಭಾಗವಾದ ಡ್ಯುಯೋಡೆನಂ ಹೊಕ್ಕಿದೆ.
ಕಿಯಾರಾಳ ಹೊಟ್ಟೆಯಲ್ಲಿ ಸಿಲುಕಿದ್ದ ಕೇಶದುಂಡೆಯನ್ನು ಹೊರತೆಗೆಯಲು ವೈದ್ಯರು ಎರಡು ಗಂಟೆಗಳ ಕಾಲ ಶ್ರಮಿಸಿದ್ದಾರೆ.