ಅಂತರಜಾಲ ಅನ್ನೋ ಅಗೋಚರ ಜಗತ್ತಿನಲ್ಲಿ ಅಪರಾಧಿಗಳು ಆಡೋ ಆಟಗಳು ಒಂದೆರಡಲ್ಲ. ಇತ್ತೀಚೆಗೆ 34 ವರ್ಷದ ವ್ಯಕ್ತಿಗೆ ಚಾಟ್-ಕಮ್-ಗೇಮಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾಗಿದ್ದ ಯುವತಿ 10 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾಳೆ.
ಹೊಸದಿಲ್ಲಿಯ ಕಾಲೇಜೊಂದರಲ್ಲಿ ಎಂಬಿಬಿಎಸ್ ಓದುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಯುವತಿಗೆ ಆನ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಕೆಲ ದಿನಗಳ ನಂತರ ಅವರು ತಮ್ಮ ತಮ್ಮ ಮೊಬೈಲ್ ಸಂಖ್ಯೆಯನ್ನ ವಿನಿಮಯ ಮಾಡಿಕೊಂಡಿದ್ದಾರೆ. ಮೊದಲು ಚಾಟಿಂಗ್‌ನಿಂದ ಶುರುವಾದ ಇವರ ಗೆಳೆತನ ಮಾತುಕತೆ ತನಕ ಮುಂದುವರೆದಿದೆ.
ಕೆಲದಿನಗಳ ನಂತರ ತನ್ನ ತಂದೆ ನಿಧನವಾಗಿದ್ದಾರೆ, ತನ್ನ ವಿದ್ಯಾಭ್ಯಾಸಕ್ಕಾಗಿ ಸಮಸ್ಯೆ ಆಗುತ್ತಿದೆ. ಹಣಕಾಸಿನ ಸಹಾಯ ಮಾಡಿ ಎಂದು ಆ ಯುವತಿ, ವ್ಯಕ್ತಿಗೆ ಹಣವನ್ನ ಕೇಳಿದ್ದಾಳೆ. ಆಕೆಯ ಗೋಳಿನ ಕಥೆಯನ್ನ ಕೇಳಿ ಆ ವ್ಯಕ್ತಿ 3 ತಿಂಗಳ ಅವಧಿಯಲ್ಲಿ, ಡಿಜಿಟಲ್ ವಾಲೆಟ್‌ನಿಂದ ಏನಿಲ್ಲ ಅಂದರೂ ಸುಮಾರು 10 ಲಕ್ಷ ರೂ. ಹಣದ ಸಹಾಯ ಮಾಡಿದ್ದಾನೆ. ಆಕೆ ಮತ್ತೆ ಮತ್ತೆ ದುಡ್ಡು ಕೇಳಿದ್ದಾಳೆ. ಕೊನೆಗೆ ಆತ ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಆಗ ಆಕೆ ಆತನಿಂದ ನುಣ್ಣಗೆ ಜಾರಿಕೊಂಡಿದ್ದಾಳೆ. ಕೊನೆಗೆ ಈತನಿಗೆ ತಾನು ಮೋಸ ಹೋಗಿದ್ದು ಅರಿವಾಗಿದೆ. ಆಗ ನವಘರ್ ಪೊಲೀಸ್ ಠಾಣೆಗೆ ಹೋಗಿ ಆಕೆಯ ವಿರುದ್ಧ ದೂರು
ದಾಖಲಿಸಿದ್ದಾರೆ.
ಸದ್ಯಕ್ಕೆ ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 420 ಮತ್ತು 507 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುಂಬೈ ಪೊಲೀಸರ ಅಪರಾಧ ವಿಭಾಗದ ಸೈಬರ್ ಕ್ರೈಮ್ ಸೆಲ್ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ವಂಚಕರು, ನಾನಾ ನೆಪಗಳನ್ನ ಮಾಡಿ ಅಮಾಯಕರಿಂದ ಹಣವನ್ನ ವಸೂಲಿ ಮಾಡಿಕೊಳ್ಳುತ್ತಾರೆ. ಒಟಿಪಿ, ಕೆವೈಸಿ ನವೀಕರಣ ಅನ್ನೊ ನೆಪದಲ್ಲಿ ಅಕೌಂಟ್‌ನಲ್ಲಿರುವ ಹಣಗಳನ್ನ ಲೂಟಿ ಮಾಡುತ್ತಾರೆ.
“ಯಾವುದೇ ಬಾಂಕ್ ಅಥವಾ ಸಂಸ್ಥೆಯ ವಿವರಗಳನ್ನ ಅಥವಾ ಪಿನ್ ಸಂಖ್ಯೆಗಳನ್ನ ಗುಪ್ತವಾಗಿಡಿ, ಅಪ್ಪಿ ತಪ್ಪಿ ಮೋಸದ ಕರೆಗಳಿಗೆ ಗುರಿಯಾಗಿ ಓಟಿಪಿ ಸಂಖ್ಯೆಗಳನ್ನ ಹೇಳುವ ಮುನ್ನ ಎಚ್ಚರ, ದುರದೃಷ್ಟವಶಾತ್, ವಿದ್ಯಾವಂತರು ಆನ್‌ಲೈನ್ ವಂಚನೆಗೆ ಹೆಚ್ಚು ಗುರಿಯಾಗುತ್ತಿರುವುದು ಎಂದು ಡಿಸಿಪಿ ಸೈಬರ್ ಕ್ರೈಮ್, ಬಾಲ್ಡಿಂಗ್ ರಜಪೂತ್ ವಿವರಿಸಿದರು.