ಮುಂಬೈ: ಉಬರ್ ಕ್ಯಾಬ್ ವಿಳಂಬದಿಂದಾಗಿ ವಿಮಾನ ತಪ್ಪಿಸಿಕೊಂಡ ಮುಂಬೈನ ವಕೀಲೆಯೊಬ್ಬರಿಗೆ 20 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಉಬರ್ ಇಂಡಿಯಾಗೆ ಮಹಾರಾಷ್ಟ್ರದ ಥಾಣೆಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಆದೇಶಿಸಿದೆ.
ಉಬರ್ ಚಾಲಕನ ನಿರ್ಲಕ್ಷ್ಯ ಮತ್ತು ಅಸಡ್ಡೆ ವರ್ತನೆಯಿಂದ ವಿಮಾನ ನಿಲ್ದಾಣ ತಲುಪಲು ವಿಳಂಬವಾಗಿದೆ ಎಂದು ವಕೀಲೆ ಕವಿತಾ ಶರ್ಮಾ ಆರೋಪಿಸಿದ್ದರು. ಈ ವಾದವನ್ನು ಮಾನ್ಯ ಮಾಡಿದ ಗ್ರಾಹಕರ ಕೋರ್ಟ್, 10 ಸಾವಿರ ರೂ. ನಷ್ಟ ಪರಿಹಾರ ಮತ್ತು 10 ಸಾವಿರ ರೂ. ಕೋರ್ಟ್ ವೆಚ್ಚ ನೀಡುವಂತೆ ಉಬರ್ಗೆ ನಿರ್ದೇಶಿಸಿದೆ.
ಕವಿತಾ ಅವರು 2018 ರಲ್ಲಿ ಪ್ರಮುಖ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ಚೆನ್ನೈಗೆ ಪ್ರಯಾಣಿಸಬೇಕಾಗಿತ್ತು. ನಗರದ ದೊಂಬಿವಿಲಿಯಲ್ಲಿರುವ ತಮ್ಮ ಮನೆಯಿಂದ 36 ಕಿಲೋಮೀಟರ್ ದೂರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಅವರು ಕ್ಯಾಬ್ ಒಂದನ್ನು ಬುಕ್ ಮಾಡಿದ್ದರು. ಚಾಲಕ ವಿಳಂಬ ಮಾಡಿ ಬಂದಿದಕ್ಕಾಗಿ ವಿಮಾನ ತಪ್ಪಿ ಹೋಗಿತ್ತು. ಇದಕ್ಕಾಗಿ ಅವರು ಕೋರ್ಟ್ ಮೆಟ್ಟಿಲೇರಿದ್ದರು.