
ಎಸ್‌ಎಫ್ ಗುಪ್ತಾ ಎಂದು ಗುರುತಿಸಲಾಗಿರುವ ಸಿಬ್ಬಂದಿ, ಸೆಂಟ್ರಲ್ ರೈಲ್ವೇಯ ಲೋಕಲ್ ರೈಲಿನ ಎರಡನೇ ದರ್ಜೆಯ ಮಹಿಳಾ ಕೋಚ್‌ನಲ್ಲಿ ಯುವತಿಯೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ತನಿಖೆ ಎದುರಿಸುವಂತಾಗಿದೆ.
ಡಿಸೆಂಬರ್ 6 ರಂದು ರಾತ್ರಿ 10 ಗಂಟೆ ವೇಳೆ ಈ ಘಟನೆ ನಡೆದಿದೆ. ರಾತ್ರಿಯ ಪ್ರಯಾಣದ ಸಮಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗೃಹರಕ್ಷಕ ಎಸ್ ಎಫ್ ಗುಪ್ತಾ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ.
ವೈರಲ್ ವಿಡಿಯೋದಲ್ಲಿ ಯುವತಿ ರೈಲಿನಲ್ಲಿ ರೀಲ್ಸ್ ಮಾಡುತ್ತಿರುತ್ತಾಳೆ. ಈ ವೇಳೆ ಆರಂಭದಲ್ಲಿ ಗುಪ್ತಾ ಆಕೆಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಆಕೆಗೆ ಯಾವುದೇ ಅಪಾಯ ಅಥವಾ ಅನಾಹುತ ಆಗದಂತೆ ವರ್ತಿಸುವಂತೆ ಮಾರ್ಗದರ್ಶನ ನೀಡುತ್ತಿರುವುದನ್ನು ಕಾಣಬಹುದು. ಆದರೆ ಕಹಾನಿ ಮೇ ಟ್ವಿಸ್ಟ್ ಎನ್ನುವಂತೆ ಇದ್ದಕ್ಕಿದ್ದಂತೆ ಗುಪ್ತಾ, ಯುವತಿ ಜೊತೆ ಡ್ಯಾನ್ಸ್ ಮಾಡಲು ಆರಂಭಿಸುತ್ತಾನೆ.
ಈ ಘಟನೆಯ ಕುರಿತು ತಕ್ಷಣವೇ ಪ್ರತಿಕ್ರಿಯಿಸಿದ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಗುಪ್ತಾ ವಿರುದ್ಧ ಡಿಸೆಂಬರ್ 8 ರಂದು ಡೀಫಾಲ್ಟ್ ವರದಿಯನ್ನು ಸಲ್ಲಿಸಿದರು. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸುವುದನ್ನು ತಡೆಯಬೇಕು. ಸಮವಸ್ತ್ರದಲ್ಲಿ ಮತ್ತು ಕರ್ತವ್ಯದಲ್ಲಿರುವಾಗ ಚಿತ್ರೀಕರಣ, ವೀಡಿಯೊಗಳು ಅಥವಾ ಫೋಟೋಗಳಿಗೆ ಪೋಸ್ ನೀಡದಂತೆ ಅಥವಾ ಸೆಲ್ಫಿಗಳಲ್ಲಿ ತೊಡಗಿಸಿಕೊಳ್ಳದಂತೆ ಎಲ್ಲಾ ಸಿಬ್ಬಂದಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಗುಪ್ತಾ ಅವರ ವರ್ತನೆ ಬಗ್ಗೆ ವಿವರ ಕೇಳಿ ವಿಚಾರಣೆ ಮಾಡಲಾಗಿದೆ.