ದೇಶದ ಅತಿ ಅಗಲದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಪೂರ್ಣ 17-09-2021 6:25AM IST / No Comments / Posted In: Latest News, India, Live News 150ಕ್ಕೂ ಅಧಿಕ ಇಂಜಿನಿಯರ್ಗಳ ನೇತೃತ್ವದಲ್ಲಿ 1500ಕ್ಕೂ ಅಧಿಕ ಕಾರ್ಮಿಕರು ದೇಶದಲ್ಲೇ ಅತ್ಯಂತ ಅಗಲವಾದ ಹಾಗೂ ನಾಲ್ಕನೇ ಅತೀ ಉದ್ದದ ಸುರಂಗ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ಮಹಾರಾಷ್ಟ್ರದ ಮುಡಿಗೆ ಇನ್ನೊಂದು ಗರಿಯನ್ನು ಸೇರಿಸಿದ್ದಾರೆ. ನಾಸಿಕ್ ಹೆದ್ದಾರಿಯ ಇಗತ್ಪುರಿ ಬಳಿ ಈ ಸುರಂಗ ನಿರ್ಮಾಣವಾಗಿದೆ. 8 ಕಿಲೋಮೀಟರ್ ಉದ್ದದ ಈ ಅವಳಿ ಸುರಂಗಗಳು 17.5 ಮೀಟರ್ ಅಗಲವಿದೆ . ಇದು 700ಕಿಲೋಮೀಟರ್ ಅಂತರ ಹೊಂದಿರುವ ಮುಂಬೈ – ನಾಗ್ಪುರ ಮಾರ್ಗವನ್ನು ತ್ವರಿತಗತಿಯಲ್ಲಿ ತಲುಪಲು ಸಹಾಯ ಮಾಡುತ್ತದೆ. ಈ ಹಿಂದೆ 14-15 ಗಂಟೆಗಟ್ಟಲೆ ಸಮಯ ತೆಗೆದುಕೊಳ್ತಿದ್ದ ಮುಂಬೈ – ನಾಗ್ಪುರ ನಡುವಿನ ಪ್ರಯಾಣವು ಈ ಸುರಂಗದ ಬಳಿಕ 8-9 ಗಂಟೆಗಳಲ್ಲಿಯೇ ಪೂರ್ಣಗೊಳ್ಳಲಿದೆ. 2745 ಕೋಟಿ ರೂಪಾಯಿ ವೆಚ್ಚದ ಈ ಅವಳಿ ಸುರಂಗ ಯೋಜನೆಯು ನಾಸಿಕ್ ಜಿಲ್ಲೆಯ ತರಂಗಪಡ ಗ್ರಾಮ ಹಾಗೂ ಥಾಣೆಯ ವಶಲಾ ಗ್ರಾಮವನ್ನು ಸಂಪರ್ಕಿಸುತ್ತದೆ. ಈ ಮೂಲಕ ಕಾಸರ ಘಾಟ್ನ 30-35 ನಿಮಿಷಗಳ ಪ್ರಯಾಣ ಸಮಯವನ್ನು ಉಳಿಸಬಹುದಾಗಿದೆ. ದೇಶದ ಇತಿಹಾಸದಲ್ಲಿಯೇ ಕೇವಲ 2 ವರ್ಷಗಳ ಅವಧಿಯಲ್ಲಿ ಅತ್ಯಂತ ಅಗಲವಾದ ಹಾಗೂ 8 ಕಿಲೋಮೀಟರ್ ಉದ್ದದ ಸುರಂಗವು ನಿರ್ಮಾಣವಾಗಿಯೇ ಇರಲಿಲ್ಲ ಎಂದು ಎಂಎಸ್ಆರ್ಡಿಸಿ ಜಂಟಿ ಎಂಡಿ ಹಾಗೂ ಪಿಡಬ್ಲುಡಿ ಸೆಕ್ರೆಟರಿ ಅನಿಲ್ ಕುಮಾರ್ ಗಾಯಕವಾಡ ಹೇಳಿದ್ದಾರೆ.