ನಿರ್ಮಾಣ ಕಾಮಗಾರಿಯ ಸೈಟಿನಲ್ಲಿ, ಮಳೆ ನೀರು ತುಂಬಿದ್ದ ಲಿಫ್ಟ್ ಶಾಫ್ಟ್ ಒಳಗೆ ಬಿದ್ದ ಏಳು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಮುಂಬಯಿಯ ಅಂಧೇರಿಯಲ್ಲಿ ನಡೆದಿದೆ.
ಸ್ಲಂ ವಾಸಿಗಳು ಮದುವೆ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದ ಎಸ್‌ಆರ್‌ಎ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ. ಸೈಟ್ ಮೇಲುಸ್ತುವಾರಿಯ ವಿರುದ್ಧ ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ.
ಮೃತಪಟ್ಟ ಬಾಲಕ ಮೆಹಬೂಬ್ ಖಾನ್ ತನ್ನ ಹೆತ್ತವರೊಂದಿಗೆ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ತೆರಳಿದ್ದ. ಆಟವಾಡುತ್ತಿದ್ದ ವೇಳೆ ಅಚಾನಕ್ಕಾಗಿ ಲಿಫ್ಟ್ ಶಾಫ್ಟ್ ಒಳಗೆ ಬಾಲಕ ಬಿದ್ದಿದ್ದಾನೆ ಎಂದು ಶಂಕಿಸಲಾಗಿದೆ.
ಮದುವೆ ಸಂಭ್ರಮದ ಸಂಗೀತದ ಶಬ್ದ ಜೋರಾಗಿದ್ದ ಕಾರಣ ಬಾಲಕನ ಕೂಗಾಟ ಯಾರಿಗೂ ಕೇಳಿಸಿಲ್ಲ. ತಮ್ಮ ಮಗ ಸಿಗದೇ ಹುಡುಕಾಟಕ್ಕೆ ಮುಂದಾದ ಆತನ ಹೆತ್ತವರಿಗೆ ಶಾಫ್ಟ್ ಮೇಲೆ ತೇಲಾಡುತ್ತಿದ್ದ ಸ್ಲಿಪ್ಪರ್‌ಗಳು ಸಿಕ್ಕಿವೆ. ಬಾಲಕನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ಸೇರಿಸಿದರೂ ಆತ ಅದಾಗಲೇ ಮೃತಪಟ್ಟಿದ್ದ.
“ಮದುವೆ ಆಯೋಜಿಸಿದ್ದವರದ್ದೂ ಸಹ ಇದರಲ್ಲಿ ತಪ್ಪಿದೆ. ಸದ್ಯಕ್ಕೆ ನಾವು ಸೈಟ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ವಿರುದ್ಧ ಐಪಿಸಿಯ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವು) ಅಡಿ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವ ಕಾರಣ, ಪ್ರಕರಣ ದಾಖಲಿಸುತ್ತಿದ್ದೇವೆ. ಘಟನೆಗೆ ಹೊಣೆಗಾರರಾಗಬಲ್ಲ ಇತರರನ್ನೂ ಸಹ ನಾವು ಬುಕ್ ಮಾಡಿದ್ದೇವೆ,” ಎಂದು ಡಿಎನ್ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.