ತಂತ್ರಜ್ಞಾನವು ಅಭಿವೃದ್ಧಿಯಾದಂತೆಲ್ಲ ಸೈಬರ್ ಕಳ್ಳರ ಕಾಟ ಇನ್ನಷ್ಟು ಮಿತಿಮೀರುತ್ತಲೇ ಇದೆ. ಹಣದ ವ್ಯವಹಾರದ ವಿಚಾರವಾಗಿ ಯಾವುದೇ ಮೆಸೇಜ್ಗಳು ನಿಮ್ಮ ಮೊಬೈಲ್ಗೆ ಬಂದರೂ ಸಹ ಆದಷ್ಟು ಜಾಗರೂಕರಾಗಿ ಇರಬೇಕು. ನಿಮ್ಮ ಪರಿಚಯಸ್ಥರ ಹೆಸರಿನಲ್ಲಿ ದೋಖಾ ನಡೆಸುವಂತಹ ಸೈಬರ್ ಕಳ್ಳರ ಗ್ಯಾಂಗ್ ಆ್ಯಕ್ಟಿವ್ ಆಗಿದೆ.
ಸ್ನೇಹಿತರ ಡಿಪಿಯನ್ನು ಹೊಂದಿದ್ದ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ಮೆಸೇಜ್ನ್ನು ನಂಬಿ ವ್ಯಕ್ತಿಯೊಬ್ಬ ಬರೋಬ್ಬರಿ ಮೂರು ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ವಿವಿಧ ಹಂತಗಳಲ್ಲಿ ಹಣ ಜಮೆ ಮಾಡಿದ ಬಳಿಕ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಮೊಬೈಲ್ ಸಂಖ್ಯೆಯನ್ನು ಪರಿಶೀಲನೆಗೆ ಒಳಪಡಿಸಿದ ವೇಳೆಯಲ್ಲಿ ನಿಜಾಂಶ ಬೆಳಕಿಗೆ ಬಂದಿದೆ.
ಮುಂಬೈನ ಭುಲಾಭಾಯಿ ದೇಸಾಯಿ ರಸ್ತೆಯಲ್ಲಿ ವಾಸವಿದ್ದ 65 ವರ್ಷದ ವೃದ್ಧನು ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಬಂದಿದೆ. ಈ ಅಪರಿಚಿತ ಮೊಬೈಲ್ ಸಂಖ್ಯೆಯಲ್ಲಿ ವೃದ್ಧನ ಸ್ನೇಹಿತರ ಫೋಟೋವನ್ನೇ ಡಿಪಿಯಾಗಿ ಹಾಕಲಾಗಿತ್ತು. ತುರ್ತು ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ 3 ಲಕ್ಷ ರೂಪಾಯಿ ನೀಡುವಂತೆ ಮೆಸೇಜ್ ಕಳುಹಿಸಲಾಗಿತ್ತು.
ಆ ಮೊಬೈಲ್ ಸಂಖ್ಯೆಗೆ ವೃದ್ಧ ಕರೆ ಮಾಡಲು ಯತ್ನಿಸಿದರೂ ಸಹ ಅದು ಸಾಧ್ಯವಾಗಿರಲಿಲ್ಲ. ಗೆಳೆಯನಿಗೆ ಹಣದ ಅವಶ್ಯಕತೆ ನಿಜವಾಗಿಯೂ ಇರಬಹುದು ಎಂದು ನಂಬಿದ ವೃದ್ಧ ಆ ಮೊಬೈಲ್ ಸಂಖ್ಯೆಗೆ ಹಣವನ್ನು ಕಳುಹಿಸಿದ್ದರು. ಇದಾದ ಬಳಿಕ ಮತ್ತೆ 2 ಲಕ್ಷ ರೂಪಾಯಿಗೆ ಬೇರೊಂದು ಮೊಬೈಲ್ ಸಂಖ್ಯೆಯಿಂದ ಬೇಡಿಕೆ ಇಡಲಾಗಿತ್ತು. ಇದರಿಂದ ಅನುಮಾನಗೊಂಡ ವೃದ್ಧ ಸ್ನೇಹಿತನನ್ನು ಸಂಪರ್ಕಿಸಿದ್ದಾರೆ. ಆ ವೇಳೆ ಸ್ನೇಹಿತ ನಾನು ಯಾವುದೇ ರೀತಿಯ ಹಣವನ್ನು ಕೇಳಿಲ್ಲ ಎಂದು ಹೇಳಿದ್ದಾರೆ. ವಂಚನೆಗೊಳಗಾಗಿರುವುದು ಖಾತ್ರಿಯಾಗುತ್ತಿದ್ದಂತೆಯೇ ವೃದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.