ದೇಶದ ರಿಯಲ್ ಎಸ್ಟೇಟ್ ನಕ್ಷೆಯಲ್ಲಿ ಅತ್ಯಂತ ದುಬಾರಿ ವಲಯದಲ್ಲಿರುವ ಮುಂಬೈ ದಕ್ಷಿಣ ಭಾಗದಲ್ಲಿ ಸ್ವಂತ ಮನೆ ಇರುವುದು ಎಂದರೆ ಅದು ಭಾರೀ ಶ್ರೀಮಂತಿಕೆಯ ಸೂಚಕ ಎಂದೇ ಹೇಳಬಹುದು.
ವರ್ಲಿ, ಬಿಕೆಸಿಯಂಥ ಪ್ರದೇಶಗಳಲ್ಲಿ ಅಗ್ರ ಕಂಪನಿಗಳ ಸಿಇಓಗಳು ವಾಸವಿರುತ್ತಾರೆ. ಇಂಥದ್ದೇ ಮತ್ತೊಂದು ಪ್ರದೇಶವೆಂದರೆ ಅದು ಮಲಬಾರ್ ಹಿಲ್. ಮುಂಬೈನ ಅತ್ಯಂತ ಸಿರಿವಂತ ಪ್ರದೇಶಗಳಲ್ಲಿ ಒಂದಾದ ಮಲಬಾರ್ ಹಿಲ್‌ನಲ್ಲಿ ಈಗ ಬಜಾಜ್ ಆಟೋ ಚೇರ್ಮನ್ ನೀರಜ್ ಬಜಾಜ್ 252 ಕೋಟಿ ರೂ. ಮೌಲ್ಯದ ಪೆಂಟ್ ಹೌಸ್ ಖರೀದಿ ಮಾಡಿದ್ದಾರೆ.
ಈ ಪ್ರದೇಶದಲ್ಲಿ ಕಟ್ಟಲಾಗಿರುವ ದಿ ಲೋಧಾ ಮಲಬಾರ್ ಸೂಪರ್ ಲಕ್ಸೂರಿ ಟವರ್ ಒಂದರ 29, 30 ಹಾಗೂ 31ನೇ ಮಹಡಿಗಳನ್ನು ಖರೀದಿ ಮಾಡಿರುವ ನೀರಜ್ ಬಜಾಜ್, ತಮ್ಮ ಬಾಲ್ಕನಿಯಿಂದ ಅರಬ್ಬೀ ಸಮುದ್ರದ ವಿಹಂಗಮ ನೋಟವನ್ನು ಎಂಜಾಯ್ ಮಾಡಲಿದ್ದಾರೆ. 18,000 ಚದರ ಅಡಿ ವಿಸ್ತಾರದಲ್ಲಿ ಹಬ್ಬಿರುವ ಎಂಪೆರರ್ಸ್ ಪ್ಯಾಲೇಸ್ ಹೆಸರಿನ ಈ ಮನೆಯನ್ನು 1.4 ಲಕ್ಷ ರೂ. ಪ್ರತಿ ಚದರ ಅಡಿಯಂತೆ ಕೊಟ್ಟು ಖರೀದಿ ಮಾಡಿದ್ದಾರೆ ಬಜಾಜ್.
ಇದೇ ವೇಳೆ, ವೆಲ್ಸ್ಪನ್ ಸಮೂಹದ ಚೇರ್ಮನ್ ಬಿಕೆ ಗೋಯೆಂಕಾ ಅವರು ವರ್ಲಿ ಪ್ರದೇಶದಲ್ಲಿ 240 ಕೋಟಿ ರೂ. ತೆತ್ತು ಪೆಂಟ್‌ಹೌಸ್ ಒಂದನ್ನು ಖರೀದಿ ಮಾಡಿದ್ದಾರೆ. ಇಂಥ ಮನೆಗಳ ಖರೀದಿಗೆ ತೆರಬೇಕಾದ ಸ್ಟಾಂಪ್ ಡ್ಯೂಟಿಯೇ 15 ಕೋಟಿ ರೂ. ಗಳಾಗಿದೆ.