ಮುಂಬೈನ ಅಂಧೇರಿ ಪೂರ್ವದಲ್ಲಿ 25 ವರ್ಷದ ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ. ಆಕೆ ತನ್ನ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಾಯ್ ಫ್ರೆಂಡ್ ಹೀನಾಯವಾಗಿ ನಡೆಸಿಕೊಂಡಿದ್ದ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆತನನ್ನು ಈಗ ಬಂಧಿಸಿರುವ ಪೊಲೀಸರು ನವೆಂಬರ್ 29 ರ ವರೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
25 ವರ್ಷದ ಏರ್ ಇಂಡಿಯಾ ಪೈಲಟ್ ಸೃಷ್ಟಿ ನವೆಂಬರ್ 25 ರಂದು ಅಂಧೇರಿ ಪೂರ್ವದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊವೈ ಪೊಲೀಸರು ಆಕೆಯ 27 ವರ್ಷದ ಗೆಳೆಯ ಆದಿತ್ಯ ಪಂಡಿತ್‌ನನ್ನು ಬಂಧಿಸಿದ್ದಾರೆ.
ಆಕೆ ತನ್ನ ಬಾಡಿಗೆ ಫ್ಲಾಟ್‌ನಲ್ಲಿ ಡೇಟಾ ಕೇಬಲ್‌ನೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸೃಷ್ಟಿಯ ಸಂಬಂಧಿಕರು ಪಂಡಿತ್ ಆಕೆಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ, ಫೋನ್ ಮೂಲಕ ಅವಳೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದು, ಇದು ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಪೊಲೀಸರು ನವೆಂಬರ್ 26 ರಂದು ಪ್ರಕರಣ ದಾಖಲಿಸಿಕೊಂಡು ಪಂಡಿತ್ ನನ್ನು ಬಂಧಿಸಿದ್ದರು. ನ್ಯಾಯಾಲಯವು ನವೆಂಬರ್ 29 ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಆಕೆಯ ಶವದ ಬಳಿ ಅಥವಾ ಫ್ಲಾಟ್‌ನಲ್ಲಿ ಯಾವುದೇ ಆತ್ಮಹತ್ಯೆ ನೋಟ್ ಕಂಡುಬಂದಿಲ್ಲ.
ಎಫ್ಐಆರ್ ಪ್ರಕಾರ, ಸೃಷ್ಟಿ ಕೊಠಡಿ ಸಂಖ್ಯೆ 601, ಬಿ ವಿಂಗ್, ಕನಕಿಯಾ ರೈನ್ ಫಾರೆಸ್ಟ್, ಮರೋಲ್, ಅಂಧೇರಿ ಪೂರ್ವದಲ್ಲಿ ವಾಸವಾಗಿದ್ದು, ವಾಣಿಜ್ಯ ಪೈಲಟ್ ಆಗಿದ್ದರು. ಮೂಲತಃ ಉತ್ತರ ಪ್ರದೇಶದವರಾದ ಅವರು ಜೂನ್ 2023 ರಿಂದ ಮುಂಬೈನಲ್ಲಿ ಕೆಲಸದ ನಿಮಿತ್ತ ವಾಸಿಸುತ್ತಿದ್ದರು. ನವೆಂಬರ್ 25 ರಂದು ಮಧ್ಯರಾತ್ರಿ ಮತ್ತು ಮಧ್ಯಾಹ್ನ 3 ಗಂಟೆಯ ನಡುವೆ ಅವರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಎರಡು ವರ್ಷಗಳ ಹಿಂದೆ ವಾಣಿಜ್ಯ ಪೈಲಟ್ ಪರವಾನಗಿಗಾಗಿ ತರಬೇತಿ ಪಡೆಯುತ್ತಿದ್ದಾಗ ಸೃಷ್ಟಿ ಮತ್ತು ಪಂಡಿತ್ ದೆಹಲಿಯಲ್ಲಿ ಭೇಟಿಯಾಗಿದ್ದು, ಪ್ರೀತಿಯಲ್ಲಿ ಸಿಲುಕಿದ್ದರು.
ಘಟನೆಗೂ ಮುನ್ನ ಪಂಡಿತ್, ಸೃಷ್ಟಿ ಅವರೊಂದಿಗೆ ಅಂಧೇರಿಯ ಫ್ಲಾಟ್‌ನಲ್ಲಿ ಸುಮಾರು ಐದಾರು ದಿನಗಳ ಕಾಲ ತಂಗಿದ್ದ. ನವೆಂಬರ್ 25 ರಂದು, 1 ಗಂಟೆಯ ಸುಮಾರಿಗೆ ಆತ ಕಾರಿನಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದ. ಚಾಲನೆಯ ಸಮಯದಲ್ಲಿ, ಸೃಷ್ಟಿ ಅವನಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಕೂಡಲೇ ವಾಪಾಸ್ ಬಂದ ಆತ ಫ್ಲಾಟ್ ಬಾಗಿಲು ಲಾಕ್ ಆಗಿರುವುದನ್ನು ಕಂಡು, ಆಕೆಯ ಸ್ನೇಹಿತೆ ಉರ್ವಿ ಪಾಂಚಾಲ್ ಅವರನ್ನು ಸಂಪರ್ಕಿಸಿದ್ದ.
ಪಾಂಚಾಲ್ ಸೃಷ್ಟಿಯ ಫ್ಲಾಟ್‌ಗೆ ಬಂದಿದ್ದು, ಒಟ್ಟಿಗೆ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ, ಅಂತಿಮವಾಗಿ ಬಾಗಿಲನ್ನು ತೆರೆಯಲು ಕೀ ಮೇಕರ್ ಕರೆ ತಂದಿದ್ದು, ಸೃಷ್ಟಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಆಕೆಯನ್ನು ಅಂಧೇರಿ ಪೂರ್ವದ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು ಅಲ್ಲಿ ವೈದ್ಯರು ಈಗಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದರು.
ಸೃಷ್ಟಿ ಅವರ ಚಿಕ್ಕಪ್ಪ ಪಂಡಿತ್ ವಿರುದ್ಧ ದೂರು ದಾಖಲಿಸಿದ್ದಾರೆ, ಆತ ಸಾರ್ವಜನಿಕವಾಗಿ ಕಿರುಕುಳ ಮತ್ತು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.