ನವದೆಹಲಿ: ತಾಂತ್ರಿಕ ದೋಷದಿಂದ ಸ್ಪೈಸ್ ಜೆಟ್ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬೆನ್ನಲ್ಲೇ ಮತ್ತೊಂದು ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಹಾರಾಟದಲ್ಲಿದ್ದ ವೇಳೆ ವಿಂಡ್ ಶೀಲ್ಡ್ ಬಿರುಕು ಬಿಟ್ಟಿದ್ದರಿಂದ ಮುಂಬೈನಲ್ಲಿ ಸ್ಪೈಸ್ ಜೆಟ್ ತುರ್ತು ಲ್ಯಾಂಡಿಂಗ್ ಆಗಿದೆ ಎಂದು ಡಿಜಿಸಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನವಷ್ಟೇ ದೆಹಲಿ -ದುಬೈ ವಿಮಾನ ತಾಂತ್ರಿಕ ಕಾರಣದಿಂದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಸಂಜೆ ವೇಳೆಗೆ ಮತ್ತೊಂದು ಸ್ಪೈಸ್ ಜೆಟ್ ವಿಮಾನ ಮುಂಬೈನಲ್ಲಿ ಲ್ಯಾಂಡಿಂಗ್ ಆಗಿದೆ. ಕಳೆದ 17 ದಿನಗಳ ಅವಧಿಯಲ್ಲಿ ಸ್ಪೈಸ್ ಜೆಟ್ ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷದ ಕನಿಷ್ಠ 7ನೇ ಘಟನೆ ಇದಾಗಿದೆ.
ಸ್ಪೈಸ್ ಜೆಟ್ ವಿಮಾನವೊಂದು ಹೊರಭಾಗದ ವಿಂಡ್ ಶೀಲ್ಡ್ ಪ್ಯಾನ್ ಮಿಡ್ ಏಯರ್‌ನಲ್ಲಿ ಬಿರುಕು ಬಿಟ್ಟಿದ್ದು, ಮಂಗಳವಾರ ಮುಂಬೈನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ. ಕಾಂಡ್ಲಾ – ಮುಂಬೈ ನಡುವೆ ಸಂಚರಿಸುವ ಸ್ಪೈಸ್ ಜೆಟ್ Q400 ವಿಮಾನದಲ್ಲಿ P2 ಸೈಡ್ ವಿಂಡ್ ಶೀಲ್ಡ್ ಹೊರ ಫಲಕವು ಬಿರುಕು ಬಿಟ್ಟಿತ್ತು ಎಂದು ಹೇಳಿದ್ದಾರೆ.