
ಚಿಕ್ಕಮಗಳೂರು: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮತ್ತೆ ಕಾಡ್ಗಿಚ್ಚು ಸಂಭವಿಸಿದೆ. ಮುಳ್ಳಯ್ಯನಗಿರಿ ತಪ್ಪಲಿನ ಬೈರೇಗುಡ್ಡ ಪ್ರದೇಶದಲ್ಲಿ ಕಾಡ್ಗಿಚ್ಚಿನಿಂದಾಗಿ ನೂರಾರು ಎಕರೆ ಅರಣ್ಯ ಸಂಪತ್ತು ಬೆಂಕಿಗಾಹುತಿಯಗಿವೆ.
ಬೈರೇಗುಡ್ಡ ಬಳಿ ಕಾಡಿಗೆ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ಅರಣ್ಯ ಸಂಪತ್ತು, ವನ್ಯಜೀವಿಗಳು, ಪಕ್ಷಗಳು ಅಗ್ನಿಗಾಹುತಿಯಾಗಿವೆ. ಬೈರಗುಡ್ಡದಿಂದ ಕವಿಕಲ್ ಗುಂಡಿ ಅರಣ್ಯದವರೆಗೂ ಬೆಂಕಿಯ ಕೆನ್ನಾಲಿಗೆ ಕ್ಷಣ ಕ್ಷಣಕ್ಕೂ ವ್ಯಾಪಿಸುತ್ತಲೇ ಬರುತ್ತಿದೆ.
ಕಾಡ್ಗಿಚ್ಚಿನ ಸ್ಥಳಕ್ಕೆ ಹೋಗಲು ಸಾಧ್ಯವಾಗದೇ ಅರಣ್ಯ ಸಿಬ್ಬಂದಿಗಳು ಪರದಾಟ ನಡೆಸಿದ್ದಾರೆ. ಬೆಂಕಿಯನ್ನು ತಹಬದಿಗೆ ತರುವುದೇ ದೊಡ್ಡ ಸವಾಲಾಗಿದೆ. ಬೈರಗುಡ್ಡ ಎತ್ತರ ಪ್ರದೇಶವಾಗಿದ್ದು, ಮುಳ್ಳಯ್ಯನಗಿರಿಯಲ್ಲಿ ಬೀಸುವ ಭಾರಿ ಗಾಳಿಯಿಂದ ಇಳಿಜಾರು ಪ್ರದೇಶದತ್ತ ಬೆಂಕಿ ಕೆನ್ನಾಲಿಗೆಯನ್ನು ಚಾಚುತ್ತಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ಎಲ್ಲವನ್ನೂ ಆಪೋಷನ ತೆಗೆದುಕೊಳ್ಳುತ್ತಿದೆ.