ಕಳೆದ ಒಂದು ವಾರದಿಂದ ಉತ್ತರಪ್ರದೇಶದ ಬಿಜೆಪಿ ನಾಯಕರು, ಪಕ್ಷವನ್ನ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಈಗ ಬಿಜೆಪಿ, ಯಾದವ್ ಕುಟುಂಬದ ಬಲಹೀನತೆಯನ್ನ ಬಳಸಿಕೊಂಡು, ಅಂತಿಮವಾಗಿ ತನ್ನದೇ ಆದ ಗೆಲುವು ಸಾಧಿಸಬಹುದು ಎಂದು ಹೇಳಲಾಗ್ತಿದೆ. ಸಮಾಜವಾದಿ ಪಕ್ಷದ ನಾಯಕ, ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಕೇಸರಿ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ.
ಅಪರ್ಣಾ ಯಾದವ್ ಅವರು ಮುಲಾಯಂ ಸಿಂಗ್ ಅವರ ಕಿರಿಯ ಮಗ ಪ್ರತೀಕ್ ಯಾದವ್ ಅವರ ಪತ್ನಿ. ಕೆಲ ದಿನಗಳಿಂದ ಬಿಜೆಪಿ ಮತ್ತು ಅಪರ್ಣಾ ಯಾದವ್ ನಡುವೆ ಮಾತುಕತೆ ನಡೆಯುತ್ತಿದ್ದು, ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅಪರ್ಣಾ ಯಾದವ್ ಬಿಜೆಪಿ ಸೇರುವ ಸಾಧ್ಯತೆ ಇದ್ದು, ಉಭಯ ಪಕ್ಷಗಳು ಒಪ್ಪಂದಕ್ಕೆ ಬಂದಿವೆ ಎಂದು ವರದಿಯಾಗಿದೆ.
ಅಪರ್ಣಾ ಯಾದವ್, 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋ ಕ್ಯಾಂಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಜೋಶಿ, ಅಪರ್ಣಾ ಅವ್ರನ್ನ 33,796 ಮತಗಳ ಅಂತರದಿಂದ ಸೋಲಿಸಿದ್ದರು.
ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಅಪರ್ಣಾ ಯಾದವ್ ತೀರ್ಮಾನಿಸಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಬಿಜೆಪಿ ಈ ಬಾರಿ ಅವರನ್ನು ಬೇರೆ ಕ್ಷೇತ್ರದಿಂದ ಕಣಕ್ಕಿಳಿಸಲು ಉತ್ಸುಕವಾಗಿದೆ ಎಂದು ವರದಿಯಾಗಿದೆ.
ಬಿಜೆಪಿ ನೆನ್ನೆಯಷ್ಟೇ ತನ್ನ 107 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. 16 ಜಾಟ್‌ಗಳು ಸೇರಿದಂತೆ 44 ಒಬಿಸಿ ಹೆಸರುಗಳು ಈ ಪಟ್ಟಿಯಲ್ಲಿವೆ. ಜೊತೆಗೆ ಮೇಲ್ವರ್ಗದ 43 ಮತ್ತು ಪರಿಶಿಷ್ಟ ವರ್ಗದ 19 ಅಭ್ಯರ್ಥಿಗಳು ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಇನ್ನುಳಿದ ಅಭ್ಯರ್ಥಿಗಳ ಹೆಸರನ್ನ ಮುಂದಿನ ದಿನಾಂಕದಲ್ಲಿ ಘೋಷಿಸಲು ಬಿಜೆಪಿ ತೀರ್ಮಾನಿಸಿದ್ದು, ಈ ಪಟ್ಟಿಯಲ್ಲಿ ಅಪರ್ಣಾ ಯಾದವ್ ಅವರ ಹೆಸರು ಇರಬಹುದು ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ.