
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥದ ಮೇಲೆ ಅಳವಡಿಸಿದ್ದ ಮುಕ್ತಿ ಬಾವುಟವನ್ನು ಬೆಂಗಳೂರಿನ ಉದ್ಯಮಿ ಹಾಗೂ ನಾಯಕನಹಟ್ಟಿಯ ಅಳಿಯ ತೇಜಸ್ವಿ ಆರಾಧ್ಯ ಅವರು 63 ಲಕ್ಷ ರೂ.ಗೆ ಬಿಡ್ ಮಾಡಿ ಖರೀದಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹರಾಜಿನಲ್ಲಿ 2 ಲಕ್ಷ ರೂಪಾಯಿ ಹೆಚ್ಚುವರಿ ಮೌಲ್ಯಕ್ಕೆ ಮುಕ್ತಿ ಬಾವುಟ ಹರಾಜಾಗಿದೆ.
10 ಲಕ್ಷ ರೂಪಾಯಿಗೆ ಹರಾಜಿನ ಬಿಡ್ ಆರಂಭವಾಗಿದ್ದು, ತೇಜಸ್ವಿ ಆರಾಧ್ಯ ದಿಢೀರನೆ 50 ಲಕ್ಷ ರೂಪಾಯಿಗೆ ಹರಾಜು ಕೂಗಿದರು. ನಂತರ ಶಾಸಕ ವೀರೇಂದ್ರ ಪಪ್ಪಿ ಮತ್ತು ತೇಜಸ್ವಿ ಆರಾಧ್ಯ ನಡುವೆ ಸ್ಪರ್ಧೆ ನಡೆದು ತೇಜಸ್ವಿ ಆರಾಧ್ಯ 63 ಲಕ್ಷ ರೂಪಾಯಿಗೆ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
2023, 2024ರಲ್ಲಿ ಸಚಿವ ಡಿ. ಸುಧಾಕರ್ ಕ್ರಮವಾಗಿ 55 ಲಕ್ಷ ರೂ. ಹಾಗೂ 61 ಲಕ್ಷ ರೂಪಾಯಿಗೆ ಮುಕ್ತಿ ಬಾವುಟ ಪಡೆದುಕೊಂಡಿದ್ದರು. ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆದುಕೊಳ್ಳಲು ಉದ್ಯಮಿಗಳು, ರಾಜಕಾರಣಿಗಳ ನಡುವೆ ಪೈಪೋಟಿಗೆ ನಡೆಯುತ್ತದೆ. ಇದನ್ನು ಖರೀದಿಸಿದರೆ ಸಂಪತ್ತು ವೃದ್ಧಿಸುತ್ತದೆ ಎನ್ನುವ ನಂಬಿಕೆ ಇದೆ.