ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ, ಇತ್ತೀಚೆಗೆ ಲಾಸ್ ಏಂಜಲೀಸ್ ನಲ್ಲಿರುವ ತಮ್ಮ ಐಷಾರಾಮಿ ಭವನವನ್ನು ಮಾರಾಟ ಮಾಡಿದ್ದಾರೆ. ಆಕೆಯ ತಂದೆ ಮುಖೇಶ್ ಅಂಬಾನಿಯವರ 15,000 ಕೋಟಿ ರೂ. ಮೌಲ್ಯದ ಐಕಾನಿಕ್ ಮುಂಬೈ ನಿವಾಸ, ಆಂಟಿಲಿಯಾಗೆ ಹೋಲಿಸಿದರೆ ಇಶಾ ಅವರ LA ಆಸ್ತಿ ತುಲನಾತ್ಮಕವಾಗಿ ಸಾಧಾರಣವಾಗಿದ್ದು, ಅಂದಾಜು ರೂ. 494 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಈ ನಿವಾಸವನ್ನು ಹಾಲಿವುಡ್ ದಂಪತಿಗಳಾದ ಜೆನ್ನಿಫರ್ ಲೋಪೆಜ್ ಮತ್ತು ಬೆನ್ ಅಫ್ಲೆಕ್ ಖರೀದಿಸಿದ್ದಾರೆ.
2020 ರಲ್ಲಿ ಇಶಾ ಗರ್ಭಿಣಿಯಾಗಿದ್ದ ವೇಳೆ ಈ ನಿವಾಸದಲ್ಲಿ ಗಮನಾರ್ಹ ಸಮಯವನ್ನು ಕಳೆದರು ಎನ್ನಲಾಗಿದೆ. ವರದಿಗಳ ಪ್ರಕಾರ ಲೋಪೆಜ್ ಮತ್ತು ಅಫ್ಲೆಕ್‌ಗೆ ಮಾರಾಟವಾಗುವ ಮೊದಲು ಐದು ವರ್ಷಗಳ ಕಾಲ ಇದು ಮಾರುಕಟ್ಟೆಯಲ್ಲಿತ್ತು.
ರಿಲಯನ್ಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಪುತ್ರಿ ಇಶಾ, 2018 ರಲ್ಲಿ ಉದ್ಯಮಿ ಆನಂದ್ ಪಿರಾಮಲ್ ಅವರನ್ನು ವಿವಾಹವಾದರು. ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್ ಎದುರು 50,000 ಚದರ ಅಡಿಗಳಷ್ಟು ಬೃಹತ್ ನಿವಾಸವನ್ನು ಆನಂದ್ ಅವರ ಪೋಷಕರಾದ ಅಜಯ್ ಮತ್ತು ಸ್ವಾತಿ ಪಿರಾಮಲ್ ಉಡುಗೊರೆಯಾಗಿ ನೀಡಿದ್ದು, ಇದರ ಮೌಲ್ಯ 1,000 ಕೋಟಿ ರೂಪಾಯಿ.
ಇನ್ನು ಇಶಾ ಅವರ ಲಾಸ್ ಏಂಜಲೀಸ್ ನಿವಾಸ ಖರೀದಿಸಿರುವ ಹಾಲಿವುಡ್ ಜೋಡಿಯು 2022 ರಲ್ಲಿ ಲಾಸ್ ವೇಗಾಸ್‌ನಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ದಂಪತಿಗಳ ಒಟ್ಟು ನಿವ್ವಳ ಮೌಲ್ಯವು USD 640 ಮಿಲಿಯನ್ (ರೂ. 5,300 ಕೋಟಿ) ಎಂದು ಅಂದಾಜಿಸಲಾಗಿದೆ, ಈ ಪೈಕಿ ಲೋಪೆಜ್ ಸುಮಾರು 450 ಮಿಲಿಯನ್ (3,700 ಕೋಟಿ ರೂ.) USD ಹೊಂದಿದ್ದರೆ ಅಫ್ಲೆಕ್ USD 190 ಮಿಲಿಯನ್ (ರೂ. 1,600 ಕೋಟಿ) ಹೊಂದಿದ್ದಾರೆ.
ಮದುವೆಯಾದ ಎರಡು ವರ್ಷಗಳ ನಂತರ ಜೆನ್ನಿಫರ್ ಲೋಪೆಜ್ ಮತ್ತು ಬೆನ್ ಅಫ್ಲೆಕ್ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.