ರಾಯಚೂರು: ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಲಬೆರಿಕೆ ತುಪ್ಪ, ಪ್ರಾಣಿಗಳ ಕೊಬ್ಬು ಬಳಕೆ ವಿವಾದಕ್ಕೆ ಸಂಬಂಧಿಸಿದಂತೆ ಮಂತ್ರಾಲಯ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಪ್ರತಿಕ್ರಿಯಿಸಿದ್ದು, ಭಕ್ತರ ಶ್ರದ್ಧಾ ಕೇಂದ್ರಗಳಲ್ಲಿ ಈ ರೀತಿಯಾಗಿರುವುದು ಹೇಯ ಕೃತ್ಯ ಎಂದು ಖಂಡಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು, ತಿರುಪತಿ ಶ್ರೀನಿವಾಸನ ಸನ್ನಿದಾನ. ಹಿಂದೂಗಳ ವಿಶಿಷ್ಠ ಧಾರ್ಮಿಕ ಕೇಂದ್ರ. ಪ್ರಸಾದದಲ್ಲಿ ಕಳಪೆ ತುಪ್ಪ ಬಳಕೆ ಮಾಹಿತಿ ಕೇಳಿಬರುತ್ತಿದೆ. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಯಾರ ಅಚಾತುರ್ಯದಿಂದ ಈ ರೀತಿಯಾಗಿದೆ? ಯಾವಾಗಿನಿಂದ ನಡೆದಿದೆ? ಎಂಬುದರ ಬಗ್ಗೆ ತನಿಖೆಯಾಗಬೇಕು. ತಪ್ಪು ಮಾಡಿದವರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು ಎಂದು ಹೇಳಿದರು.
ಇದೇ ವೇಳೆ ಮಠ, ದೇವಾಲಯಗಳನ್ನು ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ಕಾಯ್ದೆ ಜಾರಿಯಾಗಬೇಕು. ಕಾರಣ ಮಠ, ಮಂದಿರ, ದೇವಾಲಗಳು ಆಯಾ ಪ್ರಾಂತದ ಭಕ್ತರಿಗೆ, ಅದರದ್ದೇ ಆದ ಸಂಪ್ರದಾಯಗಳಿಗೆ ಸಂಬಂಧಿಸಿದ ಶ್ರದ್ಧಾಕೇಂದ್ರಗಳಾಗಿವೆ. ಇದನ್ನು ರಾಷ್ಟ್ರರಾಜಧಾನಿಯಲ್ಲಿಯೋ, ರಾಜ್ಯ ರಾಜಧಾನಿಯಲ್ಲಿಯೋ ಕುಳಿತು ಯಾರೋ ನಡೆಸಲು ಆಗಲ್ಲ. ದೇಗುಲ, ಮಠಗಳಲ್ಲಿ ದೋಷ, ಸಮಸ್ಯೆಯಾದಾಗ ಸರ್ಕಾರ ಪರಿಶೀಲಿಸಬೇಕು. ದೇಗುಲಗಳ ವಿಚಾರದಲ್ಲಿ ಸರ್ಕಾರ ತಲೆಹಾಕುವುದು ಸರಿಯಲ್ಲ. ಅಲ್ಲಿನ ಪಾವಿತ್ರ್ಯತೆಯನ್ನು, ಸಂಪ್ರದಾಯಗಳನ್ನು ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರ ಹಾಗೂ ಎಲ್ಲಾ ರಾಜ್ಯಗಳ ಸರ್ಕಾರಕ್ಕೆ ನಮ್ಮ ಮನವಿ. ಮಠ, ಮಂದಿರಗಳು ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು ಎಂದು ಹೇಳಿದರು.
ಸುಬುಧೇಂದ್ರ ಶ್ರೀಗಳ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕದಲ್ಲಿ 1 ಲಕ್ಷ 80 ಸಾವಿರ ದೇವಸ್ಥಾನಗಳಿವೆ. ಇವುಗಳಲ್ಲಿ 34 ಸಾವಿರ ದೇಗುಲಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಇದು ಇವತ್ತಿನಿಂದ ಬಂದಿದ್ದಲ್ಲ. ಬ್ರಿಟೀಷರ ಕಾಲದಿಂದಲೂ ಇತ್ತು. ಮಠಗಳು ಯಾವ ಸರ್ಕಾರದ ಅಧೀನದಲ್ಲೂ ಇಲ್ಲ ಎಂದರು.
ದೇವಾಲಯಗಳು ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು, ಸ್ವತಂತ್ರವಾಗಿರಬೇಕು ಎಂಬುದಕ್ಕೆ ಇದು ರಾಜ್ಯ ಸರ್ಕಾರದಲ್ಲಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕು ಎಂದು ಹೇಳಿದರು.