ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ಸರ್ಕಾರ ಹೆಚ್ಚು ಒತ್ತು ನೀಡಲಿದೆ ಎಂದು ತಿಳಿಸಿದ್ದಾರೆ.
ಎಂಎಸ್ ಎಂಇ, ಮಧ್ಯಮ ವರ್ಗದ ಉದ್ದಿಮೆಗಳ ಮೇಲೆ ಗಮನ ಹರಿಸಲಾಗಿದ್ದು, ಈ ನಿಟ್ಟಿನಲ್ಲಿ ಮುದ್ರಾ ಯೋಜನೆಯಡಿ ನೀಡಲಾಗುತ್ತಿದ್ದ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಮುದ್ರಾ ಯೋಜನೆಯಡಿ ನೀಡಲಾಗುತ್ತಿದ್ದ ಸಾಲದ ಮಿತಿ 10 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ(ಎಂಎಸ್ ಎಂಇ) ಉದ್ದಿಮೆಗಳ ಮಾಲೀಕರು ಸುಸ್ಥಿದಾರರಾಗದೇ ದ್ಸರಿಯಾದ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡಿದ್ದಾರೋ ಅಂತವರಿಗೆ ಮಾತ್ರ 20 ಲಕ್ಷದವರೆಗೆ ಸಾಲ ಪಡೆಯಲು ಅವಕಾಶ ನೀಡಲಾಗಿದೆ.
ಎಂಎಸ್ ಎಂಇ ಉತ್ಪಾದನಾ ವಲಯಕ್ಕೆ 100 ಕೋಟಿ ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಘೋಷಿಸಲಾಗಿದೆ. ಮೂರನೇ ವ್ಯಕ್ತಿಯ ಗ್ಯಾರಂಟಿ ನೀಡದೇ ಈ ಯೋಜನೆಯಡಿ ಸಾಲ ಪಡೆಯಬಹುದು.
ಕೃಷಿಯೇತರ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಹಣಕಾಸು ನೆರವು ಒದಗಿಸುವ ನಿಟ್ಟಿನಲ್ಲಿ 2015, ಏಪ್ರಿಲ್ 8ರಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಆರಂಭಿಸಲಾಯಿತು. ಈ ಯೋಜನೆಯಡಿ ಯಾವುದೇ ಆಧಾರವಿಲ್ಲದೇ ಅತಿ ಸಣ್ಣ, ಸಣ್ಣ, ಮಧ್ಯಮ ಉದ್ದಿಮೆಗಳನ್ನು ನಡೆಸಲು ಶಿಶು (50,000 ರೂ), ಕಿಶೋರ್ (50,000-5 ಲಕ್ಷ ರೂ) ಮತ್ತು ತರುಣ್ (10 ಲಕ್ಷ ರೂ) ಹೀಗೆ ಮೂರು ವಿಧಗಳಲ್ಲಿ ಬ್ಯಾಂಕ್ ಗಳು ಸಾಲ ನೀಡಬಹುದಾಗಿದೆ. ಈಗ ಈ ಸಾಲದ ಮಿತಿಯನ್ನು 20 ಲಕ್ಷವರೆಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.