ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಲ್ಲಿಸಿರುವ ಸಿಎಂ ಸಿದ್ದರಾಮಯ್ಯ ನ್ಯಾಯಾಲಯದ ಕಣ್ತಪ್ಪಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ರಿಟ್ ಅರ್ಜಿಯಲ್ಲಿ ಸಿದ್ದರಾಮಯ್ಯ ಕೋರ್ಟ್ ಕಣ್ತಪ್ಪಿಸಿದ್ದಾರೆ. ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದಿರುವುದು ಸಿದ್ದರಾಮಯ್ಯ ಅವರಿಗೆ ಮೊದಲೇ ಗೊತ್ತಿತ್ತು. ಸಿದ್ದರಾಮಯ್ಯ ಒಟ್ಟು 713 ಪುಟಗಳ ರಿಟ್ ಅರ್ಜಿ ಹಾಕಿದ್ದಾರೆ. 531ನೇ ಪುಟವಾಗಿ ಪಾರ್ವತಿ ಬರೆದಿರುವ ಅರ್ಜಿಯ ಮೊದಲ ಪುಟವಿದೆ. ಆದರೆ 532ನೇ ಪುಟದಲ್ಲಿ ಪಾರ್ವತಿ ಅವರು ಬರೆದಿರುವ ಪತ್ರದ ಎರಡನೇ ಪುಟ ಇಲ್ಲ ಎಂದು ದೂರಿದ್ದಾರೆ.
ಅದರಲ್ಲಿಯೂ ಎರಡನೇ ಪುಟದಲ್ಲಿ ವೈಟ್ನರ್ ಹಾಕಿ ಸಾಲೊಂದನ್ನು ಅಳಿಸಲಾಗಿದೆ. 532ನೇ ಪುಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಡಾವಳಿ ಪತ್ರ ಇದೆ. ವೈಟ್ನರ್ ಹಚ್ಚಿ ಅಳಿಸಲಾಗಿರುವ ಕಾರಣಕ್ಕೆ ಎರಡನೇ ಪುಟ ಬಿಟ್ಟು ಕೇವಲ ಒಂದು ಪುಟ ಮಾತ್ರ ಕೋರ್ಟ್ ಗೆ ಕೊಟ್ಟಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ ಹಾಗೂ ಕೋರ್ಟ್ ಗೆ ಸಿದ್ದರಾಮಯ್ಯ ಸತ್ಯ ಮುಚ್ಚಿಟ್ಟಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ನ್ಯಾಯಾಲಯಕ್ಕೆ ಸತ್ಯ ಮುಚ್ಚಿಟ್ಟಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಆ.29ರಂದು ನಡೆಯಲಿರುವ ವಿಚಾರಣೆ ವೇಳೆ ಎಲ್ಲಾ ವಿಚಾರಗಳನ್ನು ಕೋರ್ಟ್ ಗಮನಕ್ಕೆ ತರುತ್ತೇನೆ. ಸಿಎಂ ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಲು ಮನವಿ ಮಾಡುತ್ತೇನೆ ಎಂದಿದ್ದಾರೆ.