ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ನೀಡಿದೆ. ಇದರ ಬೆನ್ನಲ್ಲೇ ಇಂದು ಮೈಸೂರು ಲೋಕಾಯುಕ್ತ ಪೊಲೀಸರಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಲೋಕಾಯುಕ್ತ ತನಿಖೆ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ನನಗೆ ಲೋಕಾಯುಕ್ತ ತನಿಖೆಯ ಮೇಲೆ ನಂಬಿಕೆ ಇಲ್ಲ. ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆ ಆಗಬೇಕು. ಈ ನಿಟ್ಟಿನಲ್ಲಿ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಲೋಕಾಯುಕ್ತ ರಾಜ್ಯ ಸರ್ಕಾರ ಅಧೀನ ಸಂಸ್ಥೆ. ಇವರಿಂದ ಪಾರದರ್ಶಕ, ನಿಸ್ಪಕ್ಷಪಾತ ತನಿಖೆ ಅಸಾಧ್ಯ. ನಾನು ಪ್ರಾಣದ ಹಂಗುತೊರೆದು ಹೋರಾಟ ನಡೆಸುತ್ತಿದ್ದೇನೆ. ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ.
ನಮ್ಮ ಮನೆಯವರು ಮೊದಲು ಸ್ವಲ್ಪ ಹೆದರಿದ್ದರು. ನಾನು ಒಂದು ತಿಂಗಳ ಹಿಂದೆ ಭದ್ರತೆ ಕೇಳಿದ್ದೆ. ಆದರೆ ಕೊಟ್ಟಿಲ್ಲ. ಕೊಡುವ ನಂಬಿಕೆಯೂ ಇಲ್ಲ ಎಂದು ತಿಳಿಸಿದರು.