alex Certify ಮುಡಾ ಅಕ್ರಮ ಪ್ರಕರಣ: ವಿಪಕ್ಷಗಳ ಆರೋಪಕ್ಕೆ ದಾಖಲೆಗಳನ್ನು ಮುಂದಿಟ್ಟು ಉತ್ತರಿಸಿದ ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಡಾ ಅಕ್ರಮ ಪ್ರಕರಣ: ವಿಪಕ್ಷಗಳ ಆರೋಪಕ್ಕೆ ದಾಖಲೆಗಳನ್ನು ಮುಂದಿಟ್ಟು ಉತ್ತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ದಾಖಲೆಗಳ ಮೂಲಕ ಉತ್ತರ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನದೆಸಿದ ಸಿಎಂ ಸಿದ್ದರಾಮಯ್ಯ, ಮುಡಾ ಅಕ್ರಮ ಪ್ರಕರಣ ಸಂಬಂಧ ವಿಪಕ್ಷ ಬಿಜೆಪಿ ಹಗೂ ಜೆಡಿಎಸ್ ನವರು ಅರೆಬರೆ ದಾಖಲೆಗಳನ್ನು ಮುಂದಿಟ್ಟು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜ್ಯಪಾಲರಿಗೂ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕಿಡಿಕಾರಿದ ಸಿಎಂ ಸಿದ್ದರಮಾಯ್ಯ ಮುಡಾ ನಿವೇಶನ ವಿಚಾರವಾಗಿ ಸಂಪೂರ್ಣ ದಾಖಲೆಗಳನ್ನು ಮುಂದಿಟ್ಟು ಉತ್ತರಿಸಿದರು.

ನಿಂಗ ಬಿನ್ ಜವರ ಇವರ ವಾರಸುದಾರ ಪುತ್ರರಲ್ಲೊಬ್ಬರಿಂದ ಬಿ.ಎಂ ಮಲ್ಲಿಕಾರ್ಜುನ್ ರವರು ಭೂಮಿ ಖರೀದಿ ಮಾಡಿದ್ದು, ಈ ಕ್ರಯಕ್ಕೆ ಪಿ.ಟಿ.ಸಿ.ಎಲ್. ಕಾಯ್ದೆ ಅನ್ವಯಿಸುವುದಿಲ್ಲವೆ? ಎಂಬ ವಿಪಕ್ಷಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, 2-8-1935 ರಲ್ಲಿ ಜವರನ ಮಗ ನಿಂಗ ಎನ್ನುವವರು ಮೈಸೂರು ತಾಲ್ಲೂಕು ಕಛೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆಗಿನ ಕೆಳ ಹಂತದ ಅಧಿಕಾರಿಗಳು 15-8-1935 ರಂದು ನಿಂಗ ಅವರು ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇಪಡಿಸಬೇಕೆಂದು ವರದಿ ಸಲ್ಲಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲು ಕ್ರಮವಹಿಸಿದ್ದಾರೆ. 26-9-1935 ರಂದು ಹರಾಜು ನೋಟೀಸು ಹೊರಡಿಸಿದ್ದಾರೆ. 3-10-1935 ರಂದು ಹರಾಜು ನಡೆಸಲಾಗುವುದೆಂದು ನೋಟೀಸಿನಲ್ಲಿ ತಿಳಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲಾಗಿದೆ. ಹರಾಜು ನಡೆಸಿದ ಮೇಲೆ ಈ ರೀತಿ ದಾಖಲು ಮಾಡಿದ್ದಾರೆ. “ಕೆಸರೆ ಗ್ರಾಮದ ಸ. ನಂ 464 ರ 3.16 [ ಜಮೀನು] 3 ರೂಪಾಯಿ 8 ಆಣೆ ಉಳ್ಳ ಜಮೀನು ತಾಲ್ಕು —— ರಿಂದ 27-9-35 ನೇ —– ಎಡಿ 12 ನೇ ಮೈಸೂರು ಹುಕುಂ ಮೇರೆ ಬೀಳು —— ಹರಾಜು ಮಾಡಿಸಲಾಯ್ತು. 3 ರೂಪಾಯಿ ಹರಾಜು. 1 ರೂಪಾಯಿ ನಿಂಗ ಬಿನ್ ಜವರ, ಇದರ ಮೇಲೆ ಯಾರೂ ಸವಾಲು ಮಾಡಲಿಲ್ಲವಾಗಿ ಹರಾಜು ಅಖೈರು ಮಾಡಲಾಯ್ತು ಎಂದು ದಾಖಲಿಸಲಾಗಿದೆ. 13-10-1935 ರಂದು ‘ Sale is confirmed” ಎಂದು ನಮೂದಿಸಿದ್ದಾರೆ.

ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೆ ಹೊರತು ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಹಾಗಾಗಿ ಈ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಕಾಯ್ದೆಯು ಸ್ಪಷ್ಟವಾಗಿ ಹೇಳುತ್ತದೆ. ಅಸಂಖ್ಯಾತ ತೀರ್ಪುಗಳೂ ಇವೆ ಎಂದರು.

ಖರೀದಿ ಮಾಡಲು ಸರ್ಕಾರದಿಂದ ಅನುಮತಿ ವಿಚಾರವಾಗಿ ಪಿಟಿಸಿಎಲ್ ಜಮೀನುಗಳು ಅಲ್ಲದ ಕಾರಣ ಸರ್ಕಾರದ ಅನುಮತಿ ಅಗತ್ಯವೂ ಇಲ್ಲ ಎಂಬುದು ಕಾನೂನಿನ ಜ್ಞಾನವಿರುವ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಆದರೆ ಬಿಜೆಪಿ, ಜೆಡಿಎಸ್ ನವರು ಮಾತ್ರ ಇದನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ.

ಈ ಜಮೀನುಗಳನ್ನು ಖರೀದಿ ಮಾಡುವಾಗ ವಾರಸುದಾರರನ್ನು ಈ ಭೂ ಕ್ರಯದಿಂದ ಏಕೆ ಹೊರಗಿಡಲಾಗಿತ್ತು? ಈ ಕ್ರಯವನ್ನು ಕಾನೂನಿನ ಪ್ರಕಾರ ಮಾಡಲಾಗಿದೆಯೇ? ಎಂಬ ಪ್ರಶ್ನೆಯನ್ನು ಬಿಜೆಪಿಯವರು ಎತ್ತಿದ್ದಾರೆ. ಈ ಬಗ್ಗೆ ಉತ್ತರಿಸುವುದಾದರೆ 10-4-1993 ರಲ್ಲಿ ಒಂದು ವಂಶವೃಕ್ಷ ಮಾಡಿಸಿದ್ದಾರೆ. ಅದರ ಪ್ರಕಾರ ನಿಂಗ ಬಿನ್ ಜವರ ಇವರಿಗೆ ಮೂರು ಜನ ಮಕ್ಕಳು. ಮೊದಲನೆ ಮಲ್ಲಯ್ಯ, ಎರಡನೆ ಮೈಲಾರಯ್ಯ ಮತ್ತು ಮೂರನೆ ಜೆ. ದೇವರಾಜು. ವಂಶವೃಕ್ಷದ ಪ್ರಕಾರ ಮಲ್ಲಯ್ಯ ಎನ್ನುವವರಿಗೆ ವಾರಸುದಾರರನ್ನು ತೋರಿಸಿಲ್ಲ. ಎರಡನೆ ಮೈಲಾರಯ್ಯ ಇವರಿಗೆ ಮಂಜುನಾಥ್‌ಸ್ವಾಮಿ ಎಂ ಎನ್ನುವವರಿದ್ದಾರೆ. ಆಗ ಅವರಿಗೆ 29 ವರ್ಷ ಎಂದು ನಮೂದಿಸಲಾಗಿದೆ. 3 ನೆಯವರು ದೇವರಾಜು ಎನ್ನುವವರು. [ಈ ದೇವರಾಜು ಎನ್ನುವವರೆ ಮಲ್ಲಿಕಾರ್ಜುನಸ್ವಾಮಿಯವರಿಗೆ ಜಮೀನು ಮಾರಾಟ ಮಾಡಿರುವುದು]. ಈ ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ, ಎಂ ಮಂಜುನಾಥಸ್ವಾಮಿ ಇವರುಗಳು ಸಹಿ ಮಾಡಿದ್ದಾರೆ.

ಜೆ ದೇವರಾಜು ಎನ್ನುವವರ ಹೆಸರಿಗೆ ಖಾತೆ ಮಾಡಿಕೊಡಲು ಈ ಮೇಲಿನ ಎಲ್ಲರೂ ಸಹಿ ಮಾಡಿ ಹೇಳಿಕೆ ಕೊಟ್ಟಿದ್ದಾರೆ. ಹೆಳಿಕೆಯಲ್ಲಿ ಹೀಗೆ ಬರೆಯಲಾಗಿದೆ. “ ಮೈಸೂರು ತಾಲ್ಲೂಕು ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ರೂಬು ರೂಬು. ಡಿಟೊ ಮೈಸೂರು ಸಿಟಿ ಗಾಂಧಿನಗರ 8 ನೇ ಕ್ರಾಸ್ , ಮನೆ ನಂ 4038 ರ ನಿವಾಸಿಗಳಾದ ಲೇಟ್ ನಿಂಗಯ್ಯ ಬಿನ್ ಜವರ ರವರ ಮೊದಲನೆ ಮಗ ಮಲ್ಲಯ್ಯ ಮತ್ತು ಲೇಟ್ ಮೈಲಾರಯ್ಯನವರ ಹೆಂಡತಿ ಪುಟ್ಟಗೌರಮ್ಮ ಹಾಗೂ ಮಗ ಎಂ. ಮಂಜುನಾಥಸ್ವಾಮಿ ಆದ ನಾವುಗಳು ಹೆಳಿ ಬರೆಸಿದ ಹೇಳಿಕೆ. ಅದಾಗಿ ಮೈಸೂರು ತಾಲ್ಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ. 464 ರ 3-16 ಈ ಜಮೀನುಗಳಿಗೆ ಖಾತೆ ಮಾಡಿಕೊಡಲು ಲೇಟ್ ನಿಂಗ ಬಿನ್ ಜವರ ರವರ ಮೂರನೆ ಮಗ ಜೆ.ದೇವರಾಜು ನಮೂನೆ 19 ರ ಮೂಲಕ ಅರ್ಜಿ ಸಲ್ಲಿಸಿರುವುದು ಸರಿಯಷ್ಟೆ . ಸದರಿ ಜಮೀನು ನಿಂಗ ಬಿನ್ ಜವರರವರಿಗೆ ಸೇರಿದ್ದು ಅವರು ಫವತಿಯಾಗಿ ನಮ್ಮಗಳಿಗೆ ಸದರಿ ಜಮೀನಿನಲ್ಲಿ ಭಾಗ ಬರಬೇಕಾಗಿರುವುದಿಲ್ಲ. ಈಗಾಗಲೆ ನಾವು 462 ರಲ್ಲಿ 4 ಎಕರೆ ಜಮೀನನ್ನು ಪುಟ್ಟಮ್ಮ ಎನ್ನುವವರಿಗೆ ಮಾರಿರುತ್ತೇವೆ. ಆದ್ದರಿಂದ ಅರ್ಜಿದಾರರಾದ ಜೆ. ದೇವರಾಜುರವರಿಗೆ ಸದರಿ ಜಮೀನುಗಳನ್ನು ಖಾತೆ ಮಾಡುವುದರಲ್ಲಿ ನಮ್ಮಗಳ ತಕರಾರು ಏನೂ ಇರುವುದಿಲ್ಲವೆಂದು ಹೇಳಿ ಬರೆಯಿಸಿದ ಹೇಳಿಕೆ. ಓದಿಸಿ ಕೇಳಿ ಸರಿ ಎಂದು ಒಪ್ಪಿ ರುಜು ಮಾಡಿರುತ್ತೇವೆ. ಮಲ್ಲಯ್ಯ, ಪುಟ್ಟಗೌರಮ್ಮ ಇಬ್ಬರೂ ಕನ್ನಡದಲ್ಲಿ ಸಹಿ ಮಾಡಿರುತ್ತಾರೆ. ಎಂ.ಮಂಜುನಾಥಸ್ವಾಮಿ ಇಂಗ್ಲಿಷಿನಲ್ಲಿ ಸಹಿ ಮಾಡಿರುತ್ತಾರೆ. ಇದರ ಆಧಾರದ ಮೇಲೆ ಜೆ.ದೇವರಾಜು ಅವರ ಹೆಸರಿಗೆ ಈ ಜಮೀನುಗಳು ವರ್ಗಾವಣೆಯಾಗಿವೆ.

ಹಾಗಾಗಿ ಕ್ರಯದಾರರ ವಾಸರಸುದಾರರ ಒಪ್ಪಿಗೆ ಇಲ್ಲದೆ ಖರೀದಿ ನಡೆದಿದೆ ಎಂಬ ಬಿ.ಜೆ.ಪಿ. ಯವರ ಆರೋಪವು ಸುಳ್ಳು. ಈ ಎಲ್ಲ ವ್ಯವಹಾರಗಳು 2010 ಕ್ಕಿಂತ ಮುಂಚೆ ನಡೆದಿವೆ. ಇವು ನನಗೆ ಸಂಬಧಪಟ್ಟಿದ್ದಲ್ಲ. ಆದರೂ ಸಹ ಬಿಜೆಪಿಯವರು ಈ ಸಣ್ಣ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವ ಕಾರಣ ಈ ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದೆ.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಮುಡಾದಿಂದ ಅಭಿವೃದ್ಧಿ ಹೊಂದಿದ ಜಾಗಗಳು ಎಷ್ಟು ಇವೆ? ಅಂತಹ ಡಿ-ನೋಟಿಫಿಕೇಶನ್ ಪ್ರಸ್ತಾವನೆಗಳಿಗೆ ಸರ್ಕಾರದ ಅನುಮತಿ ಪಡೆಯಲಾಗಿತ್ತೆ? ಎಂಬುದಕ್ಕೆ ಅದಕ್ಕೂ ಮೊದಲು ಪ್ಯಾರಾ ನಂ.6 ರಲ್ಲಿ ಬಿ.ಜೆಪಿ ಯವರು ಗೌರವಾನ್ವಿತ ರಾಜ್ಯಪಾಲರಿಗೆ ನೀಡಿರುವ ಮನವಿ/ ದೂರಿನಲ್ಲಿ ಸದರಿ ಜಮೀನುಗಳನ್ನು ಡಿ-ನೋಟಿಫಿಕೇಶನ್ ಮಾಡಲು ಮುಡಾದಿಂದ ಪ್ರಸ್ತಾವನೆ ಬಂದಿರಲಿಲ್ಲ, ಅರ್ಜಿದಾರರು ಅರ್ಜಿಯೂ ಕೊಟ್ಟಿರಲಿಲ್ಲ, ಆದರೂ ಡಿ.ನೋಟಿಫಿಕೇಶನ್ ನಡೆದಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.

ದಾಖಲೆಗಳನ್ನು ಪರಿಶೀಲಿಸಿದಾಗ ಕಂಡು ಬಂದ ಸತ್ಯಾಂಶಗಳು:
ಬಿಜೆಪಿ ಯವರು ಸಂಪೂರ್ಣವಾಗಿ ತಪ್ಪು ಮಾಹಿತಿಯನ್ನು ಗೌರವಾನ್ವಿತ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸದರಿ ಜಮೀನುಗಳನ್ನು ಭೂಸ್ವಾಧೀನ ಮಾಡಲು 18-09-1992 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ, ಅದು ಬಹಳ ವರ್ಷಗಳಾದರೂ ಇತ್ಯರ್ಥವಾಗಿರುವುದು ಕಂಡುಬರುವುದಿಲ್ಲ. ಆಗ, ಜಿ.ದೇವರಾಜು, ರೋಡ್ ನಂ.3406, 4ನೇ ಮುಖ್ಯ ರಸ್ತೆ, ಲಷ್ಕರ್ ಮೊಹಲ್ಲಾ ಉರ್ದು ನಗರ, ಮೈಸೂರು ರಸ್ತೆ ಇವರು 13-08-1996 ರಂದು ತಮ್ಮ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಅರ್ಜಿ ಬರೆದಿದ್ದಾರೆ.

ಈ ಜಮೀನುಗಳ ಅಂತಿಮ ಅಧಿಸೂಚನೆಯಾಗಿದ್ದು 20-08-1997 ರಂದು. ಅದಕ್ಕೂ ಮೊದಲೇ ಈ ಅರ್ಜಿ ಬರೆದಿದ್ದಾರೆ. ಅರ್ಜಿಯ ಮೇಲೆ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್. ಬಚ್ಚೇಗೌಡ ಇವರು ಮನವಿ ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅಭಿಪ್ರಾಯದೊಂದಿಗೆ ಮಂಡಿಸಿ ಎಂದು ಕಾರ್ಯದರ್ಶಿಯವರಿಗೆ ಟಿಪ್ಪಣಿ ಬರೆದಿದ್ದಾರೆ. ಅದನ್ನು ಆಧರಿಸಿ, ಒಂದು ತಿಂಗಳಾದ ಮೇಲೆ ಪತ್ರ ಮುಡಾ ಆಯುಕ್ತರಿಗೆ ಹೋಗಿದೆ.

ಮುಡಾದಲ್ಲಿ 24-07-1997 ರಂದು ಈ ಜಾಗ ಭೂಸ್ವಾಧೀನದಿಂದ ಕೈಬಿಡಲು ನಿರ್ಣಯ ಪಾಸ್ ಮಾಡಿದ್ದಾರೆ. 30-08-1997ರಂದು ಸದರಿ ಜಾಗಗಳನ್ನು ಭೂಸ್ವಾಧೀನದಿಂದ ಕೈಬಿಡಲು ಮುಡಾ ಆಯುಕ್ತರು ಸರ್ಕಾರದ ಕಾರ್ಯದರ್ಶಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.

ಸದರಿ ಶಿಫಾರಸ್ಸನ್ನು ಆಧರಿಸಿ, ಭೂ ಸ್ವಾಧೀನ ಮಾಡಿದ ಜಮೀನುಗಳನ್ನು ಡಿ-ನೋಟಿಫೈ ಮಾಡಲು ಆಗ ರೆವಿನ್ಯೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ. ವಿ ಬಾಲಸುಬ್ರಮಣ್ಯನ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇರುವುದು ದಾಖಲೆಗಳಿಂದ ತಿಳಿದು ಬರುತ್ತದೆ. ವಿ.ಗೋವಿಂದರಾಜು ಸೆಕ್ರೆಟರಿ-2, ನಗರಾಭಿವೃದ್ಧಿ ಇಲಾಖೆ ಮತ್ತು ಕೆ. ಎಂ. ತಿಮ್ಮಯ್ಯ, ಕಾನೂನು ಇಲಾಖೆಯ ಅಡಿಶನಲ್ ಸೆಕ್ರೆಟರಿ ಒಳಗೊಂಡ ತ್ರಿಸದಸ್ಯ ಸಮಿತಿಯು ಪರಿಶೀಲಿಸಿ ಡಿ ನೋಟಿಫೈ ಮಾಡಿದೆ.
ಈ 3 ಜನರ ಸಮಿತಿಯು ಬೆಂಗಳೂರಿನಲ್ಲಿ ಬಿಡಿಎಯ ಯಡಿಯೂರು- ನಾಗಸಂದ್ರ, ಮೈಸೂರಿನ ಮುಡಾದ ಕೆಸರೆ ಸೇರಿದಂತೆ ಸುಮಾರು 19 ಕಡೆ ಡಿನೋಟಿಫೈ ಮಾಡಲು ಅನುಮೋದನೆ ಮಾಡಿರುವಂತೆ ಕಾಣುತ್ತಿದೆ. ಈ ಸಮಿತಿಯು ಈ ಭೂಮಿ ಬಡಾವಣೆಯ ಕೊನೆಯಲ್ಲಿದೆ ಎಂಬುದು ಕಂಡು ಬರುತ್ತದೆ. ಇಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ನಗರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯವರು ಈ ಜಮೀನನಲ್ಲಿ ಯಾವುದೇ ಪ್ಲಾನ್ ಸಿದ್ಧಪಡಿಸಿಲ್ಲ. ಈ ಜಮೀನುಗಳನ್ನು ಡಿ ನೋಟಿಫೈ ಮಾಡುವುದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ. ಈ ಕುರಿತು ಮುಡಾದಲ್ಲೂ ನಿರ್ಣಯವಾಗಿದೆ ಎಂದು ಹೇಳಿ ಡಿನೋಟಿಫೈ ಮಾಡಲು ತೀರ್ಮಾನಿಸಿದ್ದಾರೆ. ಇದರ ಅಧಾರದ ಮೇಲೆ ಈ ಭೂಮಿಯನ್ನು ಡಿನೋಟಿಫೈ ಮಾಡಿರುವುದು ಕಂಡುಬರುತ್ತದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235- 30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ.
ಇಲ್ಲಿ ಕಾಮನ್ ಸೆನ್ಸಿನ ಪ್ರಶ್ನೆಯೊಂದಿದೆ. ದೇವರಾಜು ಎನ್ನುವವರು 13-8-1996 ರಲ್ಲಿ ಅರ್ಜಿ ಕೊಡುತ್ತಾರೆ. ನಗರಾಭಿವೃದ್ಧಿ ಇಲಾಖೆಯವರು 3-9-1996 ರಂದು ಮೂಡಾ ಆಯುಕ್ತರಿಗೆ ಪತ್ರ ಬರೆದು ವರದಿ ಕೇಳುತ್ತಾರೆ. ಅದಾಗಿ 30-8-1997 ಕ್ಕೆ ಮೂಡಾದವರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಕೇವಲ ವರದಿ ನೀಡುವುದಕ್ಕೆ ಒಂದು ವರ್ಷ ತೆಗೆದುಕೊಂಡಿದ್ದಾರೆ. ಅದಾದ ಮೇಲೆ ವಿ.ಬಾಲಸುಬ್ರಮಣ್ಯನ್ ಎಂಬ ಟಫ್ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಈ ಜಮೀನುಗಳೂ ಸೇರಿದಂತೆ ರಾಜ್ಯದ ಸುಮಾರು 19 ಕಡೆ ಭೂ ಸ್ವಾಧೀನದಿಂದ ಕೈ ಬಿಡಲು ತೀರ್ಮಾನಿಸಿದ್ದಾರೆ. ಅಂತಿಮವಾಗಿ 18-5-1998 ರಂದು ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ. ಈಗ ನಿಮ್ಮನ್ನು ಕೇಳಬಯಸುತ್ತೇನೆ. ಮುಖ್ಯಮಂತ್ರಿಯೊ, ಉಪಮುಖ್ಯಮಂತ್ರಿಯೊ ಅಥವಾ ಮಂತ್ರಿಯೊ, ಎಮ್.ಎಲ್.ಎ ಯೊ ಇದ್ದರೆ ಈ ಪ್ರಕ್ರಿಯೆ ಮುಗಿಸಲು ಎರಡು ವರ್ಷ ತೆಗೆದುಕೊಳ್ಳುತ್ತಿದ್ದರೆ?

ಭೂಮಿಯನ್ನು ಸಂಪೂರ್ಣವಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಾಗ ಡಿ-ನೋಟಿಫಿಕೇಶನ್ ಮಾಡಬಹುದೇ? ಅಂತಹ ಅಭಿವೃದ್ಧಿ ಹೊಂದಿದ ಅಥವಾ ಭಾಗಶಃ ಅಭಿವೃದ್ಧಿ ಪಡಿಸಿದ ಭೂಮಿಯನ್ನು ಮಾರಾಟ ಮಾಡಬಹುದೇ? ಅದನ್ನು ಡಿ-ನೋಟಿಫೈ ಮಾಡಿದಾಗ ಭೂಮಿಯನ್ನು ಯಾರು ಹೊಂದಿದ್ದರು? ಎಂಬುದಕ್ಕೆ ಯಾವುದೇ ಜಾಗವನ್ನು ಭೂಸ್ವಾಧೀನ ಮಾಡಿ ಭೂಮಿಯ ಪರಿಹಾರ ಪಾವತಿಸಿ ಆ ಭೂಮಿಯ ಸಂಪೂರ್ಣ ಸ್ವಾಧೀನವನ್ನು ತೆಗೆದುಕೊಳ್ಳದ ಹೊರತು ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣವಾಗುವುದಿಲ್ಲ ಎಂಬುದೆ ಕುರಿತು ಅನೇಕ ತೀರ್ಪುಗಳು ಇವೆ ಮತ್ತು ಸರ್ಕಾರದ ಕ್ರಮವೂ ಆಗಿದೆ. ಇಷ್ಟಕ್ಕೂ ಈ ಜಮೀನುಗಳನ್ನು 18-05-1998 ರಲ್ಲಿ ಕೈಬಿಡಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235- 30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ. ಹಾಗಾಗಿ ಭುಸ್ವಾಧೀನದಿಂದ ಭೂಮಿಗಳನ್ನು ಕೈಬಿಟ್ಟಾಗ ಈ ಜಮೀನುಗಳನ್ನು ಮುಡಾ ಪೊಸೆಷನ್ ತೆಗೆದುಕೊಳ್ಳದಿರುವುದು ಕಂಡುಬರುತ್ತದೆ. ಹಾಗಾಗಿ ಬಿಜೆಪಿಯವರು ಎತ್ತಿರುವ ಈ ಪ್ರಶ್ನೆ ಕೂಡ ಅಸಂಗತ ಪ್ರಶ್ನೆಯಾಗಿದೆ ಎಂದು ಸಿಎಂ ಉತ್ತರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...