ವಿಜಯಪುರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದವರ ವಿರುದ್ಧವೇ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿಯಲ್ಲಿದ್ದಾಗಲೇ ಈ ಹಗರಣ ನಡೆದಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜೀವ ಯಾರ ಶಿಷ್ಯ? ಯಾರ ನಿರ್ದೇಶನದ ಮೇರೆಗೆ ಕಾಂಗ್ರೆಸ್ ಸೇರಿದರು? ಎನ್ನುವುದು ಎಲ್ಲರಿಗೂ ಗೊತ್ತಿದೆ. ವಿಧಾನಸೌಧದಲ್ಲಿ ನಾನು ಹೇಳಿದ್ದೇನೆ. ಕೇವಲ ಸಿದ್ದರಾಮಯ್ಯ ಅವರನ್ನು ಮಾತ್ರ ಇದರಲ್ಲಿ ಗುರಿ ಮಾಡಬೇಡಿ. ಇಂದು ನಮ್ಮ ವಿಜಯೇಂದ್ರ ಹೇಳ್ತಾರೆ ಇದು ಕೇವಲ ಸಿದ್ದರಾಮಯ್ಯ ವಿರುದ್ಧದ ಹೋರಾಟವಲ್ಲ, ಕಾಂಗ್ರೆಸ್ ವಿರುದ್ಧ ಹೋರಾಟ ಎಂದು. ಮುಡಾ ಹಗರಣದಲ್ಲಿ ಯಾರು ಯಾರಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದಿದ್ದಾರೆ.
ಮುಡಾ ಹಗರಣದಲ್ಲಿ ಯಡಿಯೂರಪ್ಪ ಇದ್ದಾರೋ? ವಿಜಯೇಂದ್ರ ಇದ್ದಾರೋ? ಯಡಿಯೂರಪ್ಪ ಅಕ್ಕನ ಮಕ್ಕಳು ಇದ್ದಾರೋ? ರಾಜೀವ್ ಇದ್ದಾರೋ? ಮತ್ಯಾರು ಇದ್ದಾರೆ ಎಲ್ಲರೂ ಸಿಕ್ಕಿ ಬೀಳ್ತಾರೆ. ರಾಜೀವ್ ಯಡಿಯೂರಪ್ಪ ಶಿಷ್ಯನೋ? ವಿಜಯೇಂದ್ರ ಶಿಷ್ಯನೋ? ಯಾರೆಂದು ಹೇಳಬೇಕು. ರಾಜೀವ್ ನಿಮ್ಮ ಶಿಷ್ಯ ಇದ್ದಾನೆ. ಯಾಕೆ ಪಾದಯಾತ್ರೆ ಮಾಡ್ತೀರಿ ಎಂದು ಅವರನ್ನೇ ಕೇಳಬೇಕು ಎಂದಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ರಾಜೀವ್ ಯಾಕೆ ಕಾಂಗ್ರೆಸ್ ಸೇರಿದ. ಮೈಸೂರು, ಚಾಮರಾಜನಗರ ಗೆಲ್ಲಲು ಕಾಂಗ್ರೆಸ್ ಗೆ ಇನ್ ಡೈರೆಕ್ಟ್ ಆಗಿ ಸಪೋರ್ಟ್ ಮಾಡಲು ಹೊಂದಾಣಿಕೆ ಅಂತ ಹೇಳಿದ್ದೆನಲ್ಲ ಅದಕ್ಕೆ ಇದು ಸಾಕ್ಷಿ. ಇವರೆಲ್ಲರೂ ಸೇರಿ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಮಿರ್ ಅಹ್ಮದ್ ಎಲ್ಲರೂ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಅನೇಕರ ಸೋಲಿಗೆ ಇವರೇ ಕಾರಣ ಎಲ್ಲವೂ ಜನರಿಗೆ ಗೊತ್ತಿದೆ ಎಂದು ಆರೋಪಿಸಿದ್ದಾರೆ.