ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮೂಡಾದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಕೇಳಿಬಂದಿರುವ ನಡುವೆಯೇ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಮುಡಾ ಮಜೈ ಅಧ್ಯಕ್ಷ ಹೆಚ್.ವಿ.ರಾಜೀವ್, ಆಯುಕ್ತರ ಅನುಮತಿ ಇಲ್ಲದೇ ಒಂದೇ ದಿನದಲ್ಲಿ 848 ನಿವೇಶನಗಳ ಖಾತೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೈಸೂರಿನ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕೇರ್ಗಳ್ಳಿ, ನಗರ್ತಹಳ್ಳಿ, ಬಲ್ಲಹಳ್ಳಿ ಗ್ರಾಮದಗಳ ಒಟ್ಟು 252 ಎಕರೆ 10 ಗುಂಟೆ ಪ್ರದೇಶಗಳಲ್ಲಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ 2018ರ ಆದೇಶದ ವಿರುದ್ಧವಾಗಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಹೆಚ್.ವಿ.ರಾಜೀವ್ ಅವರೇ ಅಧ್ಯಕ್ಷರಾಗಿದ್ದಾರೆ. 252 ಎಕರೆ ಜಮೀನಿನ ಕೆಲ ಸರ್ವೆ ನಂಬರ್ ಗಳ ಕುರಿತ ವ್ಯಾಜ್ಯ ನ್ಯಾಯಾಲಯದಲ್ಲಿರುವುದರಿಂದ ಸದರಿ ಬಡಾವಣೆಗಳ ನಿವೇಶನಗಳ ಹಕ್ಕನ್ನು ಮುಡಾ ವರ್ಗಾವಣೆ ಮಾಡಬಾರದು ಎಂಬ ಆದೇಶವಿದೆ. ಈ ಆದೇಶವಿದ್ದರೂ ಹೆಚ್.ವಿ.ರಾಜೀವ್ 848 ನಿವೇಶನಗಳನ್ನು ಒಂದೇ ದಿನದಲ್ಲಿ ಮೂಡಾದಿಂದ ಬಿಡುಗಡೆಗೊಳಿಸಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಆಯುಕ್ತರ ಅನುಮೋದನೆ ಇಲ್ಲದಿದಿದ್ದರೂ ಒತ್ತಡ ಹೇರಿ ತಾಂತ್ರಿಕ ಶಾಖೆಯ ಅಧಿಕಾರಿಗಳಿಂದ ನಿವೇಶನ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.