ಮೈಸೂರು: ಮುಡಾ ಹಗರಣದಲ್ಲಿ ನನ್ನ ಪಾತ್ರವಿಲ್ಲ. ಆದರೂ ರಾಜ್ಯಪಾಲರು ಅನಗತ್ಯವಾಗಿ ಕಾನೂನು ಬಾಹಿರವಾಗಿ ನನಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಡಾ ಹಗರಣದಲ್ಲಿ ನನ್ನ ರೋಲ್ ಇಲ್ಲ. ಇದರಲ್ಲಿ ನನ್ನ ಪಾತ್ರ ಏನಿದೆ? ಅನಗತ್ಯವಾಗಿ ನನ್ನ ವಿರುದ್ಧ ಆರೋಪ ಮಾಡಿ, ನೋಟಿಸ್ ನೀಡಲಾಗಿದೆ. ರಾಜ್ಯಪಾಲರಿಗೆ ಬೆಳಿಗ್ಗೆ ದೂರು ನೀಡುತ್ತಾರೆ, ಸಂಜೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಯಾವುದೇ ಪರಿಶೀಲನೆಯನ್ನೂ ನಡೆಸದೇ ಏಕಾಏಕಿ ನೋಟಿಸ್ ನೀಡಿರುವ ರಾಜ್ಯಪಾಲರ ಕ್ರಮವೇ ಕಾನೂನು ಬಾಹಿರ. ಇದ್ಯಾವುದಕ್ಕೂ ನಾನು ಹೆದರಲ್ಲ. ಎಲ್ಲವನ್ನೂ ಎದುರಿಸುತ್ತೇನೆ ಎಂದು ಗುಡುಗಿದರು.
ಮುಡಾ ಹಗರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ರಾಜ್ಯಪಾಲರ ನೋಟಿಸ್ ವಿಚಾರವಾಗಿ ಕಾನೂನು ಹೋರಾಟ ಮಾಡುತ್ತೇನೆ. 136 ಶಾಸಕರ ಬೆಂಬಲದೊಂದಿಗೆ ನಾನು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದೇನೆ. ಹೀಗಿರುವಾಗ ಪರಿಶೀಲನೆಯನ್ನೇ ನಡೆಸದೇ ಆತುರವಾಗಿ ರಾಜ್ಯಪಾಲರು ಓರ್ವ ಸಿಎಂ ಗೆ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ ಎಂದರೆ ಯಾವುದೋ ಒತ್ತಡಕ್ಕೆ ಸಿಲುಕಿದಂತಿದೆ. ಕೇಂದ್ರದ ಕೈಗೊಂಬೆಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನವನ್ನು ಕೊಲೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.