ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿನ ದಾಳಿ ಮುಕ್ತಾಯವಾಗಿದೆ.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಮುಡಾ ಕಚೇರಿಯಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸತತ 29 ಗಂಟೆಗಳ ಕಾಲ ಶೋಧ ನಡೆಸಿದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದು, ದಾಳಿ ಅಂತ್ಯಗೊಳಿಸಿದ್ದಾರೆ.
ಅ.18ರಂದು ಮೊದಲ ದಿನ 12 ಗಂಟೆಗಳ ಕಾಲ ಹಾಗೂ ಅ.19ರಂದು ಎರಡನೇ ದಿನ 17 ಗಂಟೆಗಳ ಕಾಲ ಶೋಧ ನಡೆಸಿದ ಅಧಿಕಾರಿಗಳು, ಮುಡಾ ಆಯುಕ್ತರು ಹಾಗೂ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ. ಕೆಲ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಬರೋಬ್ಬರಿ 29 ಗಂಟೆಗಳ ಕಾಲ ಶೋಧ ನಡೆಸಿದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಅ.19ರ ಮಧ್ಯಾರಾತ್ರಿ 2:30ರ ಸುಮಾರಿಗೆ ಕಾರ್ಯಾಚಾರಣೆ ಮುಕ್ತಾಯಗೊಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾಗೆ ವಾಪಾಸ್ ನೀಡಿರುವ 14 ನಿವೇಶನಗಳ ಮೂಲ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳನ್ನು, ಮಾಹಿತಿಗಳನ್ನು ವಶಕ್ಕೆ ಪಡೆದು ತೆರಳಿದ್ದಾರೆ ಎಂದು ತಿಳಿದುಬಂದಿದೆ.