ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ-ಇಡಿ ಎಂಟ್ರಿಕೊಟ್ಟಿದ್ದು, 300 ಕೋಟಿ ಮೌಲ್ಯದ ನಿವೇಶನಗಳನ್ನು ಜಪ್ತಿ ಮಾಡಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಎಲ್ ಸಿ ಡಾ.ಯತೀಂದ್ರ ಸಿದ್ದರಾಮಯ್ಯ, ಇಡಿ ವಶಕ್ಕೆ ಪಡೆದಿರುವ ಸೈಟ್ ಗಳಿಗೂ ನಮ್ಮ ಸೈಟ್ ಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಇಡಿ ವಶಕ್ಕೆ ಪಡೆದಿರುವ 300 ಕೋಟಿ ಮೌಲ್ಯದ 142 ಸೈಟ್ ಗಳಿಗೂ ನಮ್ಮ 14 ಸೈಟ್ ಗಳಿಗೂ ಸಂಬಂಧವಿಲ್ಲ. ಸಿಎಂ ಸಿದ್ದರಾಮಯ್ಯ ವಿರುದ್ಧ ತಪ್ಪು ಸಂದೇಶ ಹೋಗಲಿ ಎಂದು ಈ ರೀತಿ ಮಾಡಲಾಗುತ್ತಿದೆ.
ಇಡಿಯವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡುವ ಅಗತ್ಯವಿರಲಿಲ್ಲ. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವ ಸಲುವಾಗಿಯೇ ಇದೇ 27ರಂದು ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಹೀಗಾಗಿ ನ್ಯಾಯಾಲಯದ ದಿಕ್ಕು ತಪ್ಪಿಸುವ ಸಲುವಾಗಿ ಈ ರೀತಿ ಮಾಡಿರಬಹುದು ಎಂದು ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ 142 ಸೈಟ್ ಗಳನ್ನು ವಶಕ್ಕೆ ಪಡೆದಿತ್ತು. ಈ ವಿಚಾರವನ್ನು ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿತ್ತು. ಆ ಟ್ವೀಟ್ ನ್ನು ಸಿಎಂ ಸಿದ್ದರಾಮಯ್ಯ ಅವರಿಗೂ ಟ್ಯಾಗ್ ಮಾಡಲಾಗಿತ್ತು.