ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧವೇ ಆರೋಪ ಕೇಳಿಬಂದಿದ್ದು, ತನಿಖೆಗೆ ರಾಜ್ಯಪಾಲರು ಕೂಡ ಅನುಮತಿ ನೀಡಿದ್ದಾರೆ. ಈ ನಡುವೆ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಜಿ.ಟಿ.ಪಾತ್ರವಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಇದೀಗ ದಿನೇಶ್ ಅವರನ್ನು ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಕೆ ಎ ಎಸ್ ಅಧಿಕಾರಿಯಾಗಿರುವ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಜಿ.ಟಿ ಅವರನ್ನು ರಾಜ್ಯ ಸರ್ಕಾರ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಅಕ್ರಮದಲ್ಲಿ ಅಂದಿನ ಮುಡಾ ಅಧ್ಯಕ್ಷ ದಿನೇಶ್ ಕುಮಾರ್ ಅವರ ಪಾತ್ರವೂ ಇದೆ ಎಂಬ ಆರೋಪವೂ ಇದೆ. ಈ ಆರೋಪ ಕೇಳಿಬರುತ್ತಿದ್ದಂತೆ ಸಚಿವ ಬೈರತಿ ಸುರೇಶ್ ಸಭೆ ನಡೆಸಿ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದರು. ಆದರೆ ಈವರೆಗೆ ಸ್ಥಳ ನಿಯೋಜನೆಯಾಗಿರಲಿಲ್ಲ. ಇದೀಗ ದಿನೇಶ್ ಕುಮಾರ್ ಅವರನ್ನು ಹಾವೇರಿ ವಿಶ್ವ ವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಲಾಗಿದೆ. ಸರ್ಕಾರದ ಈ ನಡೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.