
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂ ಎಲ್ ಸಿ ಸಿ.ಟಿ.ರವಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದು, ಹಗರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಸಿಎಂ ತವರು ಜಿಲ್ಲೆಯಲ್ಲಿಯೇ ನಡೆದಿರುವ ಮೂಡಾ ಅಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಮಾಹಿತಿ ಇಲ್ಲದೇ ನಡೆಯಲು ಸಾಧ್ಯವೇ? ಮುಖ್ಯಮಂತ್ರಿಗಳ ಬಟ್ಟೆ ಮಾತ್ರ ಪರಿಶುದ್ಧವಾಗಿದ್ದರೆ ಸಾಕಾ? ಆಡಳಿತ ವೈಖರಿಯೂ ಪರಿಶುದ್ಧವಾಗಿರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಭೂಮಿ ವಶಪಡಿಸಿಕೊಳ್ಳಬೇಕಾದರೆ 50:50 ನಿವೇಶನ ಕೊಡಬೇಕಾಗುತ್ತದೆ. ಸರ್ಕಾರಕ್ಕೆ ಮೋಸ ಮಾಡಬೇಕೆಂದೇ ವ್ಯವಸ್ಥಿತವಾಗಿ ಮಾಡಿದ್ದಾರೆ. ಮೋಸ ಮಡಿದವರು ಸಿಎಂ ಸಿದ್ದರಾಮಯ್ಯನವರಿಗೆ ಹತ್ತಿರವಾಗಿರುವವರು. ಅದಕ್ಕೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಸಿಎಂ ತವರು ಜಿಲ್ಲೆಯಲ್ಲಿಯೇ ನಡೆದಿರುವ ಸಾವಿರಾರು ಕೋಟಿ ಅಕ್ರಮವಿದು. ಸಿದ್ದರಾಮಯ್ಯ ತಮ್ಮ ಪರಿಶುದ್ಧತೆ ಸಾಬೀತುಪಡಿಸಲು ರಾಜೀನಾಮೆ ಕೊಡಬೇಕು ಎಂದು ಹೇಳಿದರು.