ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ 14 ನಿವೇಶನ ಅಕ್ರಮವಾಗಿ ಪಡೆದ ಆರೋಪ ಕೇಳಿಬಂದ ಬೆನ್ನಲ್ಲೇ ಪಾರ್ವತಿ ಅವರು ಎಲ್ಲಾ ಸೈಟ್ ಗಳನ್ನು ಹಿಂತಿರುಗಿಸಿದ್ದರು. ಆದರೂ ಕೂಡ ಕಾನೂನು ಸಮರ ಮಾತ್ರ ನಿಂತಿಲ್ಲ. ಇದೀಗ ಸಿಎಂ ಪತ್ನಿ ಪಾರ್ವತಿ ಸೇರಿದಂತೆ 12 ಜನರ ವಿರುದ್ಧ ಮಹಿಳೆಯೊಬ್ಬರು ಮತ್ತೊಂದು ಸಿವಿಲ್ ಕೇಸ್ ದಾಖಲಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕ ದೇವರಾಜು ವಿರುದ್ಧ ಅಣ್ಣನ ಮಗಳು ಜಮುನಾ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದಾರೆ. ತಮಗೆ ಮಾಹಿತಿ ನೀಡದೇಯೇ ದೇವರಾಜು ಜಮೀನು ಮಾರಾಟ ಮಾಡಿದ್ದು, ನ್ಯಾಯ ಒದಗಿಸುವಂತೆ ದೂರು ನೀಡಿದ್ದಾರೆ.
ದೇವರಾಜು ಅವರ ಅಣ್ಣ ಮೈಲಾರಯ್ಯ ಎಂಬುವವರ ಮಗಳು ಮೈಸೂರು ಜೆಎಂಎಫ್ ಸಿ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಲ್ಲಿರುವ ಜಮೀನು ದೇವರಾಜು ಅವರದ್ದಲ್ಲ. ಅದು ನಮ್ಮ ತಂದೆ ಮೈಲಾರಯ್ಯ ಅವರಿಗೆ ಸೇರಿದ್ದು. ನಮ್ಮ ಚಿಕ್ಕಪ್ಪ ದೇವರಾಜು ಮೋಸದಿಂದ ಜಮೀನು ಮಾರಾಟ ಮಾಡಿದ್ದಾರೆ. ನಮ್ಮ ತಂದೆಯ ಹೆಸರಲ್ಲಿದ್ದ ಜಮೀನನ್ನು ದೇವರಾಜು ಅವರು ತಂದೆ ಬಳಿಕ ನನ್ನ ಸಹೋದರ ಮಂಜುನಾಥ್ ಹೆಸರಿಗೆ ಮಾಡಿಕೊಡುವುದಾಗಿ ಹೇಳಿ ಸಹೋದರ ಹಾಗೂ ನನ್ನ ತಾಯಿಯನ್ನು ಕರೆದುಕೊಂಡು ಹೋಗಿ ಸಹಿ ಹಾಕಿಸಿಕೊಂಡು ಮೋಸ ಮಾಡಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ಜಮೀನು ಮಾರಾಟ ಮಾಡಿದ್ದ ವಿಷಯವೇ ನಮಗೆ ಗೊತ್ತಿರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಬಂದಾಗ ಗೊತ್ತಾಗಿದೆ ಎಂದು ಜಮುನಾ ಆರೋಪಿಸಿದ್ದಾರೆ.
ಚಿಕ್ಕಪ್ಪ ದೇವರಾಜು, ನನ್ನ ಸಹೋದರ ಹಾಗೂ ತಾಯಿಯನ್ನು ಕರೆದು ಸಹಿ ಹಾಕಿಸಿಕೊಳ್ಳುವಾಗ ನಾನಿನ್ನೂ ಚಿಕ್ಕವಳು. ಮೋಸ ಮಾಡಿ ದೇವರಾಜು ಜಮೀನು ಮಾರಾಟ ಮಾಡಿದ್ದಾರೆ. ನಮ್ಮ ಪಾಲು ನಮಗೆ ನೀಡಲಿ. ಕಾನೂನು ಪ್ರಕಾರ ನಮಗೆ ನ್ಯಾಯಬೇಕು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜಮುನಾ, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೇರಿದಂತೆ 12 ಜನರ ವಿರುದ್ಧ ಸಿವಿಲ್ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.